ಪ್ರಕೃತಿಯ ಮುಂದೆ ಮಾನವ ಅತ್ಯಂತ ಕುಬ್ಜ ಎನ್ನುವ ಸತ್ಯ ಆಗಾಗ ಸಾಬೀತಾಗುತ್ತಲೇ ಬಂದಿದೆ. ಏಕೆಂದರೆ ಭೂಮಿಯ ಮೇಲೆ ಮಾನವನ ಬದುಕು ಸಂಪೂರ್ಣವಾಗಿ ಪ್ರಕೃತಿಯನ್ನೇ ಅವಲಂಬಿಸಿದೆ ಈ ಮಾತಿಗೆ ಪ್ರಸ್ತುತ ಉದಾಹರಣೆ ಎಂಬಂತೆ ಮಾನ್ಸೂನ್ ಮಾರುತಗಳು ಭೂಮಿಯಿಂದ ದೂರಸರಿದು ಮಳೆ ಮರೀಚಿಕೆಯಾಗಿದೆ.
ಈ ವೇಳೆಗಾಗಲೇ ಕೃಷಿಕರು ಬಿತ್ತನೆ ಕಾರ್ಯ ಮುಗಿಸಬೇಕಾಗಿತ್ತು ಆದರೆ ಮುಂಗಾರು ಮಳೆ ಇಳೆಗೆ ಬೀಳದ ಕಾರಣದಿಂದ ರೈತರು ಮುಗಿಲತ್ತ ಮುಖ ಮಾಡಿದ್ದಾರೆ ನಾಡಿನ ಕೆಲವೆಡೆ ಸೀಮಿತ ಭಾಗಗಳಲ್ಲಿ ಅತ್ಯಲ್ಪ ಮಳೆಯಾಗಿರುವುದನ್ನು ಹೊರತುಪಡಿಸಿದರೆ ಉಳಿದೆಡೆಯಲ್ಲಾ ಬಿರು ಬೇಸಿಗೆಯ ವಾತಾವರಣ ಮುಂದುವರಿದಿದೆ ಜಲಾಶಯಗಳು, ನದಿ, ಹಳ್ಳಕೊಳ್ಳಗಳು ಬರಿದಾಗಿವೆ. ಒಟ್ಟಾರೆ ನಾಡಿನ ಸಮಸ್ತರಿಗೆ ಮಳೆಯ ಅಭಾವ ಬಂದಿಲ್ಲೊಂದು ರೀತಿಯಲ್ಲಿ ಅನಾನುಕೂಲ ಸೃಷ್ಟಿಸಿದೆ. ಪ್ರಕೃತಿಯಲ್ಲಿ ಎಲ್ಲವೂ ಸಮತೋಲನದಿಂದ ಇದ್ದಾಗ ಮಾತ್ರ ಜೀವಸಂಕುಲದ ಬದುಕು ಸುಸೂತ್ರವಾಗಿ ನಡೆದುಕೊಂಡು ಹೋಗಲು ಸಾಧ್ಯ. ಪ್ರಕೃತಿಯೇ ಮುನಿದರೆ ಹುಲುಮಾನವರು ಮಾಡುವುದಾದರೂ ಏನು ? ದಾಸರ ವಾಣಿಯಂತೆ “ಒಲೆ ಹೊತ್ತಿ ಉರಿದೆಡೆ ನಿಲಬಹುದು ಧರೆ ಹತ್ತಿ ಉರಿದೆಡೆ ನಿಲಬಹುದೇ? ಎಂಬ ಮಾತು ಪ್ರಸ್ತುತವಾಗುತ್ತದೆ. ಜಾಗತಿಕ ತಾಪಮಾನ ಏರಿಕೆ, ಬರ, ಪ್ರವಾಹ, ಕಾಡ್ಗಿಚ್ಚು, ಭೂಕಂಪ ಹೆಚ್ಚುತ್ತಿರುವುದಕ್ಕೆ ಪ್ರಕೃತಿಯಲ್ಲಿ ಮಾನವನ ಹಸ್ತಕ್ಷೇಪವೇ ಕಾರಣ ಎನ್ನುವ ಮಾತು ಕೇಳಿ ಬರುತ್ತಿದೆ.
ಭೂಮಿ ಒಂದು ನಿಯಮಕ್ಕೆ ಒಳಪಟ್ಟು ನಮ್ಮನ್ನೆಲ್ಲಾ ಪೊರೆಯುತ್ತಿದೆ. ಆದರೆ ನಾವುಗಳು ಮಾತ್ರ ಮಿತಿಮೀರಿದ ನಮ್ಮ ನಿರೀಕ್ಷೆಗಳನ್ನೆಲ್ಲಾ ಈ ಭೂಮಿಯ ಮೂಲಕ ಪೂರೈಸಿಕೊಳ್ಳಲು ಮುಂದಾದರೆ ಅದರಿಂದ ದೊಡ್ಡ ತೊಂದರೆ ಅನುಭವಿಸಬೇಕಾಗುತ್ತದೆ ಆದುದರಿಂದ ಸಹಜ, ಸರಳ ಪರಿಸರಕ್ಕೆ ಪೂರಕವಾದ ನಡೆ ನಮ್ಮದಾಗಲಿ.