ಕೋಲಾರ: ತಮ್ಮ ಹುಟ್ಟೂರು ತಾಲೂಕಿನ ಚೌಡದೇನಹಳ್ಳಿಯಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿರುವ ಊರ ದ್ಯಾವರ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿರುವ ಕಂದಾಯ ಸಚಿವ ಕೃಷ್ಣಭೈರೇಗೌಡ ಮಂಗಳವಾರ ತಾವೇ ಎತ್ತಿನ ಬಂಡಿ ಓಡಿಸುವ ಮೂಲಕ ಗಮನ ಸೆಳೆದರು.
ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ನಡೆಯುವ ಬಂಡಿ ದ್ಯಾವರಗಳಲ್ಲಿ ಮನೆಯ ಯಜಮಾನ ಅಥವಾ ಹಿರಿಯ ಮಗ ಎತ್ತಿನ ಬಂಡಿಯಲ್ಲಿ ದೇವರ ಪೂಜೆಗೆ ಬೇಕಾದ ಎಲ್ಲಾ ಸಾಮಗ್ರಿಗಳ ಸಮೇತ ಇಡೀ ಕುಟುಂಬಸ್ಥರನ್ನು ಕರೆ ತರುವುದು ಸಂಪ್ರದಾಯ. ಈ ಸಂಪ್ರದಾಯವನ್ನು ಸಚಿವ ಕೃಷ್ಣ ಬೈರೇಗೌಡ ಯಥಾವತ್ತಾಗಿ ಮುಂದುವರಿಸುವ ಮೂಲಕ ದೈವ ಕಾರ್ಯದಲ್ಲಿ ಭಾಗವಹಿಸಿದರು.
ಬಂಡಿ ದ್ಯಾವರದ ಅಂಗವಾಗಿ ಬುಧವಾರ ಕೃಷ್ಣ ಭೈರೇಗೌಡ ಕುಟುಂಬದವರು ಸುಮಾರು 10,000 ಮಂದಿಗೆ ಭರ್ಜರಿ ಔತಣಕೂಟದ ವ್ಯವಸ್ಥೆ ಮಾಡಿದ್ದರು.
ಮಾಂಸಾಹಾರದ ಈ ಔತಣಕೂಟದಲ್ಲಿ ಕೋಲಾರ ಮತ್ತು ಬ್ಯಾಟರಾಯನಪುರ ಕ್ಷೇತ್ರದ ಸಾರ್ವಜನಿಕರು ಸೇರಿದಂತೆ ಜಿಲ್ಲೆಯ ಕಂದಾಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಕಳೆದೊಂದು ವಾರದಿಂದ ಊರ ದ್ಯಾವರದಲ್ಲಿ ಸಕ್ರಿಯವಾಗಿರುವ ಸಚಿವ ಕೃಷ್ಣಭೈರೇಗೌಡ ಗುರುವಾರದಿಂದ ಬೆಂಗಳೂರಿನಲ್ಲಿ ಅಧಿಕೃತ ಕಾರ್ಯಗಳಲ್ಲಿ ಭಾಗವಹಿಸಲಿದ್ದಾರೆ. ಶುಕ್ರವಾರ ಕಂದಾಯ ಇಲಾಖೆ ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಸಹ ನಡೆಸಲಿದ್ದಾರೆ.