ದೈವೀಭಕ್ತಿ, ಸಂತರ ಆಶೀರ್ವಾದವೇ ಭಾರತದ ಮೂಲ ಸತ್ವ; `ಮಹಾಬಲಿ ಗ್ರೇಟ್ ಖಲಿ’

0
16

ಹುಬ್ಬಳ್ಳಿ: ವರೂರಿನಲ್ಲಿರುವ ನವಗ್ರಹ ತೀರ್ಥ ಕ್ಷೇತ್ರದಲ್ಲಿ ನಡೆಯುತ್ತಿರುವ ಭಗವಾನ್ ತೀರ್ಥಂಕರರ ಪಂಚಕಲ್ಯಾಣ ಮಹೋತ್ಸವದ ಅಂಗವಾಗಿ ಇಂದು ಭಗವಾನ್ ಪಾರ್ಶ್ವನಾಥ ಸ್ವಾಮಿಯ ರಾಜ್ಯಾಭಿಷೇಕ ಕಾರ್ಯಕ್ರಮವು ವೇದಿಕೆ ಮೇಲೆ ವಿಶೇಷವಾಗಿ ನಿರ್ಮಿಸಲಾಗಿದ್ದ ರಾಜಮಹಲ್‌ನಲ್ಲಿ ಶನಿವಾರ ಸಂಭ್ರಮದಿಂದ ಜರುಗಿತು.
ವೇದಿಕೆ ಮೇಲೆ ನಡೆದ ರಾಜ್ಯಾಭಿಷೇಕ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಅಂತರರಾಷ್ಟ್ರೀಯ ಖ್ಯಾತಿಯ ಪ್ರಸಿದ್ಧ ಕುಸ್ತಿಪಟು, ಕುಸ್ತಿ ಪಂದ್ಯಗಳ ಪೋಷಕ ರಿಂಗ್‌ನಲ್ಲಿ ಗ್ರೇಟ್ ಖಲಿ ಎಂದೇ ಕರೆಸಿಕೊಳ್ಳುವ `ದಿಲೀಪ್ ಸಿಂಗ್ ರಾಣಾ’ ಮುಖ್ಯ ಆಕರ್ಷಣೆಯಾಗಿದ್ದರು.
ಏಳು ಅಡಿಗಿಂತಲೂ ಹೆಚ್ಚು ಎತ್ತರವಿರುವ ಅವರನ್ನು ಎದುರೇ ನೋಡಿ ನೆರೆದ ಜನರು ಅಚ್ಚರಿಪಟ್ಟು ಖುಷಿಯಿಂದ ಚಪ್ಪಾಳೆ ತಟ್ಟಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ತಾವು ಭಾರತದ ಧ್ವಜವನ್ನು ಎತ್ತರಕ್ಕೆ ಹಾರಿಸಿದ್ದಾಗಿ ನುಡಿದ ರಾಣಾ ಇದಕ್ಕೆ ದೇವರು ಮತ್ತು ಗುರುಗಳ ಅನುಗ್ರಹವೇ ಕಾರಣ ಎಂದರು. ದೈವಿ ಭಕ್ತಿ, ಸಂತರ ಅಶೀರ್ವಾದದಿಂದಲೇ ಭಾರತವು ಸಾವಿರ ವರ್ಷಗಳಿಂದಲೂ ಜೀವಂತವಾಗಿದೆ. ಇವರಿಬ್ಬರ ಅನುಗ್ರಹವಿಲ್ಲದೇ ಯಾವ ವ್ಯಕ್ತಿಯೂ ಉದ್ಧಾರವಾಗಲು ಸಾಧ್ಯವಿಲ್ಲ ಎಂದು ನುಡಿದ ಖಲಿ ಇಂಥ ಪವಿತ್ರ ಉತ್ಸವಕ್ಕೆ ತಮ್ಮನ್ನು ಕರೆಸಿ ಆಶೀರ್ವಾದ ಮಾಡಿದ ಸಂತಗಣಕ್ಕೆ ಪ್ರಣಾಮ ಸಲ್ಲಿಸಿದರು.
ಎಲ್ಲ ಸುಖಗಳನ್ನು, ಸಂಸಾರವನ್ನು ತ್ಯಜಿಸಿ, ತಪಸ್ಸು ಮಾಡಿ ದೇಶ ಮತ್ತು ಸಾರ್ವಜನಿಕೆ ಹಿತಕ್ಕಾಗಿ ಹಗಲೂ ರಾತ್ರಿ ಶ್ರಮಿಸುತ್ತಿರುವ ಸನ್ಯಾಸಿಗಳಿಂದಲೇ ಭಾರತದ ಗೌರವವು ಎಲ್ಲೆಡೆ ಹೆಚ್ಚಾಗಿದೆ ಎಂದು ತಿಳಿಸಿದರು. ತಮ್ಮ ಸಾಧನೆಯಿಂದ ಖಲಿ ಮಹಾಬಲಿ ಆಗಿದ್ದಾರೆ ಎಂದು ಆಚಾರ್ಯ ಗುಣಧರ ನಂದಿ ಮಹಾರಾಜರು ಬಣ್ಣಿಸಿದರು.

Previous articleಜಾತಿಗಣತಿ ಮಂಡನೆಯಿಂದ ಹಿಂದೆ ಸರಿಯುವಲ್ಲಿ ಒತ್ತಡ ಇಲ್ಲ
Next articleಮಗನಿಗೆ ಗುರಿ ಇಟ್ಟ ಕೋವಿಗೆ ಪತ್ನಿ ಬಲಿ, ಪತಿ ಆತ್ಮಹತ್ಯೆ