ದೇವಾಲಯ ರಕ್ಷಣೆಗೆ ಸನಾತನ ಬೋರ್ಡ್ ಜಾರಿಯಾಗಲಿ

0
37

ಉಡುಪಿ: ದೇವಳಗಳ ಸಂಪತ್ತಿನಿಂದ ಆಯಾ ಊರಿಗೆ ಶಿಕ್ಷಣ ಸಿಗುವಂತಾಗಬೇಕು, ಊರಿನ ಜನರ ಆರೋಗ್ಯಕ್ಕೆ ಆ ಹಣ ಬಳಕೆಯಾಗಬೇಕು. ಹಿಂದೂ ದೇವಾಲಯಗಳ ರಕ್ಷಣೆಗೆ ಸನಾತನ ಬೋರ್ಡ್ ಜಾರಿಗೆ ಬರಬೇಕು ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅಶಿಸಿದರು.
ಶುಕ್ರವಾರ ಪೆರ್ಣಂಕಿಲ ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಅನೇಕ ದೇವಾಲಯಗಳು ಸರಕಾರದ ಕಪಿಮುಷ್ಠಿಯಲ್ಲಿವೆ. ಅವುಗಳ ಜೀರ್ಣೋದ್ಧಾರ ಆಗುತ್ತಿಲ್ಲ, ಪರಿಚಾರಕ ವರ್ಗಕ್ಕೆ ಸೂಕ್ತ ಸಂಭಾವನೆ ಸಿಗುತ್ತಿಲ್ಲ, ಭಕ್ತರು ನೀಡುವ ಕಾಣಿಕೆ ಸದ್ವಿನಿಯೋಗ ಆಗುತ್ತಿಲ್ಲ ಎಂದು ವಿಷಾದಿಸಿದರು.

ಅಪಾಯಕ್ಕೆ ಎಡೆ ಕೂಡದು
ಪ್ರಯಾಗದಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಅಭೂತಪೂರ್ವ ವ್ಯವಸ್ಥೆ ಮಾಡಿದ್ದಾರೆ. ಆದರೂ ಕೆಲವು ಅನನುಕೂಲತೆ ಆಗಿದೆ. ಕುಂಭಮೇಳಕ್ಕೆ ತೆರಳುವವರು ತಾಳ್ಮೆಯಿಂದ ವರ್ತಿಸಬೇಕು, ಅಪಾಯಕ್ಕೆ ಅವಕಾಶ ಮಾಡಿಕೊಡಬಾರದು ಎಂದವರು ಎಚ್ಚರಿಸಿದರು.

ಉತ್ತಮ ಸ್ಪಂದನೆ
ಗೋ ಸಂಪತ್ತು ರಕ್ಷಣೆಗೆ ಕರೆ ನೀಡಲಾಗಿದ್ದ ವಿಷ್ಣು ಸಹಸ್ರನಾಮ, ಶಿವ ಪಂಚಾಕ್ಷರಿ ನಾಮ ಪಾರಾಯಣ ಅಭಿಯಾನಕ್ಕೆ ಅನೇಕ ಪೀಠಾಧಿಪತಿಗಳು, ಮಠಾಧಿಪತಿಗಳು, ಸಂತರು ಹಾಗೂ ಸಮಾಜದಿಂದ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಈಗ ಒಂದು ಹಂತದ ಅಭಿಯಾನ ನಡೆದಿದೆ. ಗೋರಕ್ಷಣೆಗೆ ಸರಕಾರ ಬಗ್ಗದಿದ್ದರೆ ಮತ್ತೆ ನಮ್ಮ ಅಭಿಯಾನ ಮುಂದುವರಿಯುತ್ತದೆ. ಪೀಠಾಧಿಪತಿಗಳು ಸೌಮ್ಯ ಸ್ವರೂಪದಲ್ಲಿ ಹೋರಾಟ ಮಾಡಲು ಸಾಧ್ಯ. ಅದರಂತೆ ಮುಂದುವರಿಯುತ್ತೇವೆ ಎಂದವರು ಎಚ್ಚರಿಕೆ ನೀಡಿದರು.

ಖರ್ಗೆ ಘನತೆಗೆ ಹೇಳಿಕೆ ತಕ್ಕುದಲ್ಲ
ಕುಂಭಮೇಳದಲ್ಲಿ ಗಂಗಾಸ್ನಾನ ಮಾಡಿದರೆ ದೇಶದ ಬಡತನ ನಿರ್ಮೂಲನ ಆಗುತ್ತದೆಯೇ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಶ್ರೀಗಳು, ಕುಂಭಮೇಳಕ್ಕೆ ಬಂದ ಎಲ್ಲರನ್ನೂ ಖರ್ಗೆ ಮೂರ್ಖರು ಎಂದು ಹೇಳಿದ ಹಾಗಾಯ್ತು. ಅಲ್ಲಿಗೆ ದೇಶ ವಿದೇಶಗಳಿಂದ ಜನ ಬರುತ್ತಿದ್ದಾರೆ. ಹಾಗಿರುವಾಗ ಖರ್ಗೆ ಹೇಳಿಕೆ ಅವರ ಆಶಯ ತೆರೆದಿಟ್ಟಿದೆ. ಇಂತಹ ಬಾಲಿಶ ಹೇಳಿಕೆ ಅವರ ಘನತೆಗೆ ತಕ್ಕುದಾದ್ದಲ್ಲ. ಕುಂಭಮೇಳದಲ್ಲಿ ಮಿಂದ ಮಂದಿ ಮೂರ್ಖರೇ ಎಂದು ಶ್ರೀಗಳು ಪ್ರಶ್ನಿಸಿದರು.

Previous articleಸಾರಾಯಿ ಕೊಡಿಸದಿದ್ದಕ್ಕೆ ಬಾಟಲಿಯಿಂದ ಹಲ್ಲೆ
Next articleಇಸ್ರೋ 100ನೇ ಉಡಾವಣೆ; ಸ್ವದೇಶಿ `ಜಿಪಿಎಸ್’ ಕನಸು