ದಾವಣಗೆರೆ: ಜಿಲ್ಲೆಯಾದ್ಯಂತ ಎಡೆಬಿಡದೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಳ್ಳುವಂತಾಗಿದ್ದು, ರಸ್ತೆಗಳು ಸಂಪೂರ್ಣ ಕೆಸರುಮಯವಾಗಿ ಸಂಚಾರಕ್ಕೆ ಜನರು ತಾಪತ್ರಯ ಪಡುವಂತಾಗಿದೆ.
ಕಳೆದ ಎರಡೂರು ದಿನಗಳಿಂದ ಜಿಟಿಜಿಟಿ ಮಳೆ ಸುರಿಯುತ್ತಿದ್ದರೂ, ನಡುವೆ ಮಳೆಗೆ ಬಿಡುವು ಇರುತ್ತಿತ್ತು. ಆದರೆ ಮಂಗಳವಾರ ಬೆಳಗ್ಗೆ ೧೧.೩೦ ಗಂಟೆ ಸುಮಾರಿನಿಂದ ಆರಂಭವಾದ ಮಳೆ ಸಂಜೆಯವರೆಗೂ ನಿರಂತರವಾಗಿ ಸುರಿಯುತ್ತಿರುವುದರಿಂದ ಕೆಲಸ ಕಾರ್ಯಗಳಿಗಾಗಿ ಓಡಾಡುವವರಿಗೆ ಸಮಸ್ಯೆಯಾಯಿತು.
ಗ್ರಾಮೀಣ ಪ್ರದೇಶದ ಮಣ್ಣಿನ ರಸ್ತೆಗಳು ಕೆಸರು ಗದ್ದೆಯಂತಾಗಿದ್ದು, ನಗರದ ಮುಖ್ಯ ರಸ್ತೆಗಳಲ್ಲಿನ ಚರಂಡಿಗಳು ತುಂಬಿ ರಸ್ತೆಗೆ ನೀರು ಹರಿಯುತ್ತಿರುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ವ್ಯಾಪಾರಸ್ಥರು ಮಳೆಯಿಂದಾಗಿ ಜನರು ಬಾರದೆ ವಹಿವಾಟು ಕುಂಠಿತಗೊಂಡು ಸಂಕಷ್ಟ ಎದುರಿಸುವಂತಾಯಿತು. ಗ್ರಾಮಾಂತರದ ಪ್ರದೇಶದಲ್ಲಿನ ಮಣ್ಣಿನ ಮನೆಗಳಲ್ಲಿನ ಜನರಿಗೆ ನಿರಂತರ ಮಳೆಯಿಂದ ಗೋಡೆಗಳು ಬೀಳುವ ಆತಂಕ ಎದುರಾಗಿದ್ದರೆ, ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಗಿದೆ. ಜತೆಗೆ ನಿರಂತರ ವಿದ್ಯುತ್ ಕಡಿತದಿಂದ ಜನರು ಸಮಸ್ಯೆ ಎದುರಿಸುವಂತಾಗಿದೆ.
ಬೆಸ್ಕಾಂ ಕಾಮಗಾರಿಗೆ ಮಳೆ ಅಡ್ಡಿ: ವಿನೋಬನಗರದ ಒಂದನೇ ಮುಖ್ಯ ರಸ್ತೆಯಲ್ಲಿ ಬೆಸ್ಕಾಂ ಸಿಬ್ಬಂದಿಗಳು ಕಂಬಗಳನ್ಬು ಬದಲಾಯಿಸುವ ಕಾಮಗಾರಿ ಕೈಗೊಂಡಿದ್ದರು. ಆದರೆ ಬೆಳಗ್ಗೆಯಿಂದ ಆರಂಭವಾದ ಮಳೆ ಕಾಮಗಾರಿ ಅಡ್ಡಿ ಉಂಟು ಮಾಡಿತು. ಕಂಬ ಹಾಕಲು ತೋಡಿದ್ದ ಗುಂಡಿಗಳು ತುಂಬಿ ಹರಿಯುತ್ತಿರುವ ದ್ಯಶ್ಯ ಕಂಡು ಬಂತು. ಅದೇ ರೀತಿಯ ವಿವಿಧೆಡೆ ಕೈಗೊಂಡಿದ್ದ ಕಾಮಗಾರಿಗಳು ಮಳೆ ನಿಲ್ಲುವವರೆಗೂ ಸ್ಥಗಿತಗೊಂಡಿದ್ದವು.