ದಲಿತರನ್ನು ಕೆಣಕಿದರೆ ನಿಮಗೆ ಉಳಿಗಾಲವಿಲ್ಲ

0
7
ಪ್ರಸಾದ ಅಬ್ಬಯ್ಯ

ಹುಬ್ಬಳ್ಳಿ: ರಾಜ್ಯ ಕಂಡ ಅತ್ಯಂತ ಸರಳ ಸಜ್ಜನಿಕೆ ರಾಜಕಾರಣಿ, ದಲಿತರ ಕಣ್ಮನಿ ರಾಜ್ಯದ ಗೃಹಮಂತ್ರಿಗಳ ವಿರುದ್ಧ ಬೀದರ್‌ನಲ್ಲಿ ವಿರೂಪಾಕ್ಷ ಗಾದಗಿ ನೀಡಿರುವ ಅಶ್ಲೀಲ ಪದಗಳ ಹೇಳಿಕೆಯು ಇಡೀ ದಲಿತ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ. ಗಾದಗಿಯನ್ನು ಕೂಡಲೇ ಗಡಿಪಾರು ಮಾಡಬೇಕು. ಇಲ್ಲದಿದ್ದರೆ ದಲಿತರ ಶಕ್ತಿ ಏನೆಂಬುದು ತೋರಿಸಬೇಕಾಗುತ್ತದೆ ಎಂದು ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕರು, ಸ್ಲಂ ಬೋರ್ಡ್ ಅಧ್ಯಕ್ಷರಾದ ಪ್ರಸಾದ ಅಬ್ಬಯ್ಯ ಹೇಳಿದ್ದಾರೆ.
ಈ ಕುರಿತು ಮಂಗಳವಾರ ಪತ್ರಿಕಾ ಪ್ರಕಟಣೆ ನೀಡಿದ ಅವರು, ಪ್ರಚಾರದ ತೆವಲಿಗೆ ಮಾತೃ ಸ್ವರೂಪಿಗಳಾದ ಡಾ.ಜಿ. ಪರಮೇಶ್ವರ ಪತ್ನಿಯವರ ಬಗ್ಗೆ ಹಗುರವಾಗಿ ಮಾತನಾಡಿದ್ದು ಅತ್ಯಂತ ಖಂಡನೀಯ. ನಮಗೂ ಗಾದಗಿ ಅವರ ಪತ್ನಿ, ಅಕ್ಕ ತಂಗಿಯರ ಬಗ್ಗೆ ಹಗುರವಾಗಿ ಮಾತನಾಡಲು ಬರುತ್ತದೆ. ಆದರೆ, ಡಾ.ಬಾಬಾ ಸಾಹೇಬರು ಮತ್ತು ಸಂವಿಧಾನ ಯಾವತ್ತೂ ಅಂಥ ಸಂಸ್ಕೃತಿಯನ್ನ ಕಲಿಸಿಕೊಟ್ಟಿಲ್ಲ. ನಿಮ್ಮ ತುಚ್ಯ ಮಾತುಗಳು ನಿಮ್ಮ ಸಂಘ ಪರಿವಾರದ ಸಂಸ್ಕೃತಿಯನ್ನು ಬಿಂಬಿಸುತ್ತದೆ. ನಿಮ್ಮ ಶಾಖೆಗಳಲ್ಲಿ ಹೇಳಿಕೊಡುವ ಪಾಠಗಳು ಇಂಥವುದೇ ಎಂದು ಗೊತ್ತಾಗುತ್ತದೆ ಎಂದು ಅವರು ಜರಿದಿದ್ದಾರೆ.
ನೀವು ಮಾಡಿದ ಅಸಂವಿಧಾನಿಕ ಪದಗಳ ಬಳಕೆಯು ಕೇವಲ ಒಂದು ಕಟುಂಬಕ್ಕೆ ಸೀಮಿತವಾಗಿಲ್ಲ. ಬದಲಾಗಿ ಅದು ಇಡೀ ದಲಿತ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ. ಡಾ.ಜಿ.ಪರಮೇಶ್ವರ ಅವರ ಬೆನ್ನಿಗೆ ಲಕ್ಷಾಂತರ ದಲಿತ ಕುಟುಂಬಗಳು, ಅಭಿಮಾನಿಗಳು ಹಿತೈಶಿಗಳು ಇದ್ದೇವೆ. ದುಷ್ಕರ್ಮಿಯ ವಿರುದ್ಧ ತ್ವರಿತಗತಿಯಲ್ಲಿ ಕಾನೂನು ಕ್ರಮ ಜರುಗಿಸಬೇಕು. ತಪ್ಪಿದಲ್ಲಿ ರಾಜ್ಯದ ದಲಿತರ ಶಕ್ತಿ ಏನು, ಪ್ರಸಾದ ಅಬ್ಬಯ್ಯ ಶಕ್ತಿ ಏನೆಂಬುದನ್ನು ವಿಕೃತ ಮನಸ್ಸಿನ ವಿರೂಪಾಕ್ಷ ಗಾದಗಿ ಅವರಿಗೆ ತೋರಿಸಬೇಕಾಗುತ್ತದೆ ಎಂದು ಶಾಸಕರು ಹೇಳಿದ್ದಾರೆ.

Previous articleಬೈಕ್​, ಬಸ್ ನಡುವೆ ಭೀಕರ ಅಪಘಾತ: ಹೊತ್ತಿ ಉರಿದ ಬಸ್
Next articleನಾಲಾಯಕ್ ಹೇಳಿಕೆಗೆ ವಿಜಯೇಂದ್ರ ಸಮರ್ಥನೆ