ಭದ್ರತೆಗೆ ೧೪೦೦ ಪೊಲೀಸ್ ಸಿಬ್ಬಂದಿಗಳು ಭಾಗಿ, ಕಲಬುರಗಿ, ಬೀದರ್, ಯಾದಗಿರಿ ಎಸ್ಪಿಗಳೂ ಹಾಜರಿ, ಶಾಂತಿಯುತ ಪೂಜೆ ಮೊಬೈಲ್ ನಿಷೇಧ
ಆಳಂದ (ಕಲಬುರಗಿ ಜಿ): ಆಳಂದ ಪಟ್ಟಣದ ಹಜರತ್ ಲಾಡ್ಲೆ ಮಶಾಕ ದರ್ಗಾದಲ್ಲಿರುವ ರಾಘವ ಚೈತನ್ಯ ಲಿಂಗಕ್ಕೆ ಮಹಾಶಿವರಾತ್ರಿ ಅಂಗವಾಗಿ ಇಂದು ಕಡಗಂಚಿಯ ಶ್ರೀ ವೀರಭದ್ರ ಶಿವಾಚಾರ್ಯರ ನೇತೃತ್ವದಲ್ಲಿ ೧೦ ಜನರು ಬಾರೀ ಪೋಲಿಸ್ ಬಂದೋಬಸ್ತ್ ಮಧ್ಯೆ ಪೂಜೆ ಸಲ್ಲಿಸಿದರು.
ದರ್ಗಾದಲ್ಲಿರುವ ಲಿಂಗಕ್ಕೆ ಪೂಜೆ ಸಲ್ಲಿಸಲು ಕಳೆದ ವರ್ಷ ಪೂಜೆ ಸಲ್ಲಿಸಿದ ೧೫ ಜನರು ಮಾತ್ರ ಈ ಬಾರಿಯೂ ಪೂಜೆ ಸಲ್ಲಿಸಬೇಕು ಎಂದು ಹೈಕೋರ್ಟ್ ಆದೇಶ ನೀಡಿತ್ತು. ಆದರೆ ಕಳೆದ ವರ್ಷ ಪಾಲ್ಗೊಂಡ ೧೫ ಜನರಲ್ಲಿ ಕೇವಲ ೧೦ ಜನರು ಬಂದಿದ್ದರಿಂದ ಅವರಿಗೆ ಮಾತ್ರ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಲಾಯಿತು.
ಕಡಗಂಚಿಯ ಶ್ರೀ ವೀರಭದ್ರ ಶಿವಾಚಾರ್ಯರು ಅಲ್ಲದೆ ಲಿಂಗರಾಜಪ್ಪ ಅಪ್ಪ, ಹರ್ಷಾನಂದ ಗುತ್ತೇದಾರ್, ಪ್ರಕಾಶ ಜೋಶಿ, ಸಿದ್ದರಾಮ ಸ್ವಾಮಿ, ಗುಂಡು ಗೌಳಿ, ಆನಂದರಾಯ ಪಾಟೀಲ್, ಶಿವರಾಜ ಪಾಟೀಲ್ ರದ್ದೇವಾಡಗಿ, ಸಂತೋಷ ಹಾದಿಮನಿ, ವಿಜಯಕುಮಾರ್ ಪೂಜೆಯಲ್ಲಿ ಭಾಗವಹಿಸಿದ್ದರು.
ಪೂಜೆ ಸಲ್ಲಿಸಲು ಭಾಗವಹಿಸಿದವರಲ್ಲಿದ್ದ ಮೊಬೈಲ್‌ನ್ನು ಪೋಲಿಸರು ವಶಪಡಿಸಿಕೊಂಡರು. ಅಲ್ಲದೆ ಇವರಿಗೆ ಭಾರೀ ಭದ್ರತೆ ಕಲ್ಪಿಸಲಾಗಿತ್ತು.
ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸದಂತೆ ಭಾರೀ ಬಂದೋಬಸ್ತ್ ತಾಲೂಕ ಆಡಳಿತ ವತಿಯಿಂದ ಮಾಡಲಾಗಿತ್ತು. ಸುಮಾರು ೧,೪೦೦ ಪೊಲೀಸ್ ಸಿಬ್ಬಂದಿಗಳು ಅಲ್ಲದೆ ಬೀದರ್, ಯಾದಗಿರಿ, ಕಲಬುರಗಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳು ಬಂದೋಬಸ್ತ್ ವ್ಯವಸ್ಥೆಯಲ್ಲಿ ಹಾಜರಿದ್ದರು.
ಆಳಂದ ದರ್ಗಾದಲ್ಲಿರುವ ರಾಘವ ಚೈತನ್ಯಲಿಂಗಕ್ಕೆ ಭದ್ರತೆಯೊಂದಿಗೆ ಪೂಜೆ ಸಲ್ಲಿಸಲು ಕಾರ್ಯಕರ್ತರು ತೆರಳುತ್ತಿರುವುದು.