ದಕ್ಷಿಣ ಕನ್ನಡ ‘ಮುಸಲಧಾರೆ’ ಮಳೆ: ಐವರ ಸಾವು, ಇಬ್ಬರು ನೀರು ಪಾಲು, ಜನಜೀವನ ಅಸ್ತವ್ಯಸ್ತ

ಸಂ. ಕ. ಸಮಾಚಾರ, ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಳೆದ ರಾತ್ರಿಯಿಂದ ಎಡೆಬಿಡದೆ ಧಾರಾಕಾರವಾಗಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರತ್ಯೇಕ ಘಟನೆಗಳಲ್ಲಿ ಐವರು ಸಾವನ್ನಪ್ಪಿ, ಇಬ್ಬರು ನೀರು ಪಾಲಾಗಿದ್ದಾರೆ.
ನಿರಂತರ ಮಳೆಗೆ ಜಿಲ್ಲೆಯಾದ್ಯಂತ ನೆರೆಯಾಗಿದೆ. ಮನೆಗಳಿಗೆ ನೀರು ನುಗ್ಗಿದೆ. ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ವಿದ್ಯುತ್, ಅಂತರ್ಜಾಲ ಸೇವೆ ವ್ಯತ್ಯಯಗೊಂಡಿದೆ. ಅಲ್ಲಲ್ಲಿ ಭೂ ಕುಸಿತ, ಮನೆ ಕುಸಿತ, ಮರಗಳು ಉರುಳಿರುವ ಘಟನೆಗಳು ನಡೆದಿದೆ.
ಉಳ್ಳಾಲದ ದೇರಳಕಟ್ಟೆಯ ಬೆಳ್ಳಗ್ರಾಮದ ಕಾನಕರೆಯಲ್ಲಿರುವ ನೌಶಾದ್ ಎಂಬವರ ಮನೆ ಮೇಲೆ ಹಿಂಬದಿಯ ಗುಡ್ಡ, ತಡೆಗೋಡೆ ಕುಸಿದು ಬಿದ್ದಿದೆ. ಪರಿಣಾಮ, ಮನೆಯ ಕೊಠಡಿಯ ಕಿಟಕಿಯಡಿ ಸಿಲುಕಿ ನೌಶಾದ್ ಅವರ ಪುತ್ರಿ ನಯೀಮ (೧೦) ಅಸುನೀಗಿದ್ದಾರೆ.
ಉಳ್ಳಾಲದ ಮಂಜನಾಡಿ ಗ್ರಾಮದ ಮೊಂಟೆಪದವು ಕೋಡಿಯಲ್ಲಿ ಗುಡ್ಡ ಜರಿದು ಸೀತಾರಾಂ ಮನೆಯವರು ಅವಶೇಷಗಳಡಿ ಸಿಲುಕಿಕೊಂಡ ಘಟನೆ ನಡೆದಿದೆ. ಮಣ್ಣಿನಡಿ ಸಿಲುಕಿದ್ದ ಸೀತಾರಾಂ ಅವರ ತಾಯಿ ಪ್ರೇಮಾ(೬೦), ಅವರ ಪುತ್ರರಾದ ಆರ್ಯನ್(೨) ಮತ್ತು ಆರುಷ್(೩) ಮೃತಪಟ್ಟರೆ, ಸೀತಾರಾಂ ತಂದೆ ಕಾಂತಪ್ಪ ಪೂಜಾರಿ ಅವರ ಕಾಲು ಮುರಿದಿದೆ.

ವಿದ್ಯುತ್ ಅವಘಡ: ಉಜಿರೆ ಒಡಿಲ್ನಾಳ ಗ್ರಾಮದ ಅಮರಜಾಲು (ಪನೇಜಾಲು) ಎಂಬಲ್ಲಿ ವಿದ್ಯುತ್ ಕಂಬದ ಮೇಲೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕ ಶಾಕ್ ಹೊಡೆದು ಸಹಾಯಕ ಪವರ್ ಮ್ಯಾನ್ ಮೃತಪಟ್ಟ ಘಟನೆ ನಡೆದಿದೆ. ಮೃತ ವ್ಯಕ್ತಿ ರೇಷ್ಮೆ ರೋಡ್ ನಿವಾಸಿ ವಿಜೇಶ್ (೩೨ ) ಎಂದು ಗುರುತಿಸಲಾಗಿದೆ.

ನೀರುಪಾಲು: ನಗರದ ತೋಟ ಬೆಂಗ್ರೆಯ ಅಳಿವೆ ಬಾಗಿಲು ಸಮೀಪ ನಾಡದೋಣಿ ಮಗುಚಿದ ಪರಿಣಾಮ ಇಬ್ಬರು ಮೀನುಗಾರರು ನಾಪತ್ತೆಯಾದ ಘಟನೆ ಗುರುವಾರ ತಡರಾತ್ರಿ ನಡೆದಿದೆ.
ತೋಟ ಬೆಂಗ್ರೆ ಅಳಿವೆ ಬಾಗಿಲು ಸಮೀಪ ಮೀನು ಹಿಡಿಯುತ್ತಿದ್ದಾಗ ಭಾರೀ ಗಾಳಿ ಮಳೆಗೆ ದೋಣಿ ಮಗುಚಿ ಬಿತ್ತು ಎನ್ನಲಾಗಿದೆ. ಇದರಿಂದ ದೋಣಿಯಲ್ಲಿದ್ದ ಯಶವಂತ ಮತ್ತು ಕಮಲಾಕ್ಷ ಎಂಬವರು ನಾಪತ್ತೆಯಾಗಿದ್ದಾರೆ. ನಾಡ ದೋಣಿಯ ಪೆಟ್ರೋಲ್ ಟ್ಯಾಂಕ್ ತೋಟ ಬೆಂಗ್ರೆ ಬಳಿಯ ದಡಕ್ಕೆ ಬಂದು ಬಿದ್ದಿದೆ. ನಾಡದೋಣಿ ಕೂಡ ಕಣ್ಮರೆಯಾಗಿದೆ. ಸ್ಥಳೀಯರು ಹುಡುಕಾಟ ಆರಂಭಿಸಿದ್ದಾರೆ.

ನೆರೆ: ಉಳ್ಳಾಲ ಬೈಲಿನಲ್ಲಿ ಕಾಲುವೆಗಳನ್ನು ಒತ್ತುವರಿ ಮಾಡಿದ್ದರಿಂದ ನೀರು ಹರಿಯಲಾಗದೆ, ಕೃತಕ ನೆರೆ ಉಂಟಾಗಿದೆ. ತಾಲೂಕು ವ್ಯಾಪ್ತಿಯ ಕುಂಪಲ, ಪಿಲಾರು, ಕಲ್ಲಾಪು, ಧರ್ಮನಗರ, ತಲಪಾಡಿ, ಕಲ್ಕಟ್ಟ ಪ್ರದೇಶಗಳಲ್ಲು ಕೃತಕ ನೆರೆ ಬಂದಿದ್ದು ತಗ್ಗು ಪ್ರದೇಶಗಳು ಮುಳುಗಡೆಯಾಗಿವೆ. ನಿರಂತರ ಮಳೆ ಮತ್ತು ಕೃತಕ ನೆರೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಬಹಳಷ್ಟು ಕುಟುಂಬಗಳು ರಾತ್ರಿ ವೇಳೆ ಬೇರೆಡೆ ಸ್ಥಳಾಂತರಗೊಂಡಿದೆ. ಕಲ್ಲಾಪುವಿನಲ್ಲಿ ೫೦ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ತಲಪಾಡಿಯಲ್ಲಿ ಒಂದು ಮನೆಗೆ ನೀರು ನುಗ್ಗಿ ಹಾನಿಯಾಗಿದೆ. ಅಲ್ಲಿನ ಕುಟುಂಬವನ್ನು ರಾತ್ರಿ ವೇಳೆ ಸ್ಥಳಾಂತರಿಸಲಾಗಿದೆ.

ಶಾಲೆಗೆ ರಜೆ: ಈಗಾಗಲೇ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಸರ್ಕಾರಿ ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೆ ಪ್ರಭಾರ ಜಿಲ್ಲಾಧಿಕಾರಿ ಆನಂದ್ ರಜೆ ಘೋಷಿಸಿದ್ದಾರೆ.