ಬೆಂಗಳೂರು: ತೆರಿಗೆ ಹೆಚ್ಚು ಸಂಗ್ರಹ ಮಾಡಿದರೆ ರಾಜ್ಯದ ಅಭಿವೃದ್ಧಿ ಕೆಲಸಗಳನ್ನು ಹೆಚ್ಚು ಮಾಡಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ವತಿಯಿಂದ ಆಯೋಜಿಸಿದ್ದ ಜಿಎಸ್‌ಟಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಗೂ 2024-25ನೇ ಸಾಲಿನ ಮುಖ್ಯಮಂತ್ರಿಗಳ ಸೇವಾ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದರು.
ಪ್ರಜಾ ಸರ್ಕಾರಕ್ಕೂ ಮುನ್ನ ರಾಜರುಗಳ ಕಾಲದಿಂದಲೂ ತೆರಿಗೆ ಪದ್ಧತಿ ಇತ್ತು ಎನ್ನುವುದನ್ನು ಅನೇಕ ಶಾಸನಗಳಲ್ಲಿ ನಾವು ಕಾಣ ಬಹುದು. ಕದಂಬರು ಕರ್ನಾಟಕದಲ್ಲಿ ಮಾರಾಟ ತೆರಿಗೆಯನ್ನು ಪ್ರಾರಂಭಿಸಿದರು ಎಂದು ಶಾಸನಗಳು ಹೇಳುತ್ತವೆ. ರಾಜ್ಯ ನಡೆಸಲು ತೆರಿಗೆ ಅಗತ್ಯ. ತೆರಿಗೆ ಕೊಡಲು ಸಾಧ್ಯವಿದ್ದವರು ಮಾತ್ರ ತೆರಿಗೆಯನ್ನು ಕೊಡುತ್ತಾರೆ. ಪ್ರತಿ ಸರ್ಕಾರವೂ ಕೂಡ ತೆರಿಗೆಗಳನ್ನು ಸಂಗ್ರಹ ಮಾಡಿಯೇ ದೇಶವನ್ನು, ರಾಜ್ಯವನ್ನು ನಡೆಸುತ್ತದೆ. ಸಂವಿಧಾನ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ತೆರಿಗೆ ವಿಧಿಸುವ ಅಧಿಕಾರ ಕೊಟ್ಟಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.