ತೆಪ್ಪಹತ್ತಿ ಪ್ರಾಣ ಬಿಟ್ಟ ಯುವಕರು

ವಿಜಯಪುರ: ಆದಿಲ್ ಶಾಹಿ ರಾಜರ ಬೇಸಿಗೆ ಅರಮನೆ ಎಂದೆ ಕರೆಯಲಾಗುವ ಕಲಬುರ್ಗಿ ರಸ್ತೆಯಲ್ಲಿರುವ ಕುಮಟಗಿ ಕೆರೆಯಲ್ಲಿ ಈಜಲು ಹೋಗಿ ಇಬ್ಬರು ಯುವಕರು ದುರಂತ ಅಂತ್ಯ ಕಂಡಿದ್ದಾರೆ.
ಜಮಖಂಡಿ ನಿವಾಸಿ ಕೈಫ್ ನಿಸಾರಅಹ್ಮದ ಜಮಾದಾರ(೧೯) ಹಾಗೂ ಯೋಗಾಪುರ ನಿವಾಸಿಯಾಗಿರುವ ಸೋಹೆಲ್ ಬಾಷಾಸಾಬ ಹತ್ತರಕಿಹಾಳ(೨೫) ಈಜು ಬಾರದೆ ಪ್ರಾಣ ಕಳೆದುಕೊಂಡಿದ್ದಾರೆ. ಸದ್ಯಕ್ಕೆ ಓರ್ವನ ಶವ ಮಾತ್ರ ಸಿಕ್ಕಿದ್ದು ಇನ್ನೊಬನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಘಟನೆ ಹಿನ್ನೆಲೆ…
ವಿಜಯಪುರದಲ್ಲಿ ರಂಜಾನ ಹಬ್ಬದ ನಂತರ ಮುಸ್ಲಿಂ ಬಾಂಧವರು ಗಾರ್ಡನ್‌ಗಳಿಗೆ ಹೋಗಿ ಊಟ ಮಾಡಿ ಬರುವ ವಾಡಿಕೆ ಇದೆ. ಅದರಂತೆ ಯೋಗಾಪೂರ ಕಾಲೋನಿಯಿಂದ ಒಟ್ಟು ೬ ಜನ ಯುವಕರ ತಂಡ ಕುಮಟಗಿ ಕೆರೆ ಪಕ್ಕದಲ್ಲಿರುವ ಆದಿಲ್ ಶಾಹಿ ಬೇಸಿಗೆ ಅರಮನೆಯ ಗಾರ್ಡನ್‌ಗೆ ಹೋಗಿದ್ದು, ಸ್ವಲ್ಪ ಹೊತ್ತು ಸಮಯ ಕಳೆದು ನಂತರ ಪಕ್ಕದ ಕೆರೆಯಲ್ಲಿ ಈಜಾಡಲು ಹೋಗಿದ್ದಾರೆ.
ಕೆರೆಯ ಹಿಂಬಾಗದ ತೋಟದಲ್ಲಿ ಇಡಲಾಗಿದ್ದ ಮೀನುಗಾರರ ತೆಪ್ಪ ತೆಗೆದುಕೊಂಡು ಚೇಷ್ಟೆ ಮಾಡುತ್ತಾ ಕೆರೆಯ ಆಳಕ್ಕೆ ಹೋಗಿದ್ದಾರೆ. ಆಗ ಅದರಲ್ಲಿನ ಯುವಕನೊರ್ವ ನೀರಲ್ಲಿ ಜಿಗಿದಿದ್ದು ತೆಪ್ಪ ಬ್ಯಾಲನ್ಸ್ ಆಗದೆ ಮುಗುಚಿ ಬಿದ್ದು ದುರ್ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ.
೬ ಜನರಲ್ಲಿ ೩ ಜನರಿಗೆ ಈಜು ಬರುತ್ತಿದ್ದು ಅವರ ಈಜಿ ದಡ ಸೇರಿದ್ದಾರೆ. ಮೂವರಲ್ಲಿ ಇಬ್ಬರು ಯುವಕರು ಭಯದಿಂದ ಸ್ಥಳ ಬಿಟ್ಟು ಓಡಿದ್ದು ಒಬ್ಬ ಯುವಕ ಧೈರ್ಯ ಮಾಡಿ ಮೂವರ ರಕ್ಷಣೆ ಮಾಡಲು ಮುಂದಾಗಿದ್ದಾನೆ. ಇಬ್ಬರನ್ನು ಎಳೆದು ದಡಕ್ಕೆ ತಂದಿದ್ದಾನೆ. ಆದರೆ ಅದರಲ್ಲಿ ಒಬ್ಬ ಮಾತ್ರ ಬದುಕುಳಿದಿದ್ದು ಇನ್ನೊಬ್ಬ ಪ್ರಾಣ ಬಿಟ್ಟಿದ್ದಾನೆ. ಅಷ್ಟರಲ್ಲಿ ಇನ್ನೊರ್ವ ಕೆರೆಯಲ್ಲಿ ಮುಳುಗಿ ಕಣ್ಮರೆಯಾಗಿದ್ದು ಹುಡುಕಾಟ ನಡೆಯುತ್ತಿದೆ.
ಗೋಲಗುಂಬಜ್ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಬದುಕುಳಿದವರ ಹೆಸರುಗಳ ಮಾಹಿತಿ ಲಭ್ಯವಾಗಿಲ್ಲ.