Home Advertisement
Home ತಾಜಾ ಸುದ್ದಿ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ದ ಜೈನರ ಆಕ್ರೋಶ 

ಮಹೇಶ್ ಶೆಟ್ಟಿ ತಿಮರೋಡಿ ವಿರುದ್ದ ಜೈನರ ಆಕ್ರೋಶ 

0
140

ಮಂಗಳೂರು: ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿ ಅಪಮಾನಗೊಳಿಸಿ ಗಲಭೆಗೆ ಹುನ್ನಾರ ನಡೆಸುತ್ತಿರುವ, ರಾಷ್ಟ್ರೀಯ ಸಮಗ್ರತೆಗೆ ಬಾಧಕವಾಗುವ ಅಪರಾಧವನ್ನು ಮಹೇಶ್ ಶೆಟ್ಟಿ ತಿಮರೋಡಿ ಎಸಗುತ್ತಿದ್ದು ವಿರುದ್ಧ ಕೇಸು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಮಂಗಳೂರಿನ ಭಾರತೀಯ ಜೈನ್ ಮಿಲನ್ ಸಂಘಟನೆ ಪೊಲೀಸ್ ಇಲಾಖೆ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಬೆಳ್ತಂಗಡಿಯಲ್ಲಿ ನಡೆದ ಗಣೇಶೋತ್ಸವದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರು ಜೈನ್ ಸಮುದಾಯವನ್ನು ನಿಂದಿಸಿದ್ದಾರೆ ಎಂದು ಆರೋಪಿಸಿ ಭಾರತೀಯ ಜೈನ್ ಮಿಲನ್ ನೇತೃತ್ವದಲ್ಲಿ ಬುಧವಾರ ಮಂಗಳೂರಿನ ಮಿನಿ ವಿಧಾನಸೌಧ ಎದುರು ನಡೆದ ಜೈನ್ ಸಮುದಾಯದ ಬೃಹತ್ ಪ್ರತಿಭಟನೆ ನಡೆಯಿತು.
ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬೆಳ್ತಂಗಡಿ, ಧರ್ಮಸ್ಥಳ, ವೇಣೂರು ಪೊಲೀಸ್ ಠಾಣೆಗೆ ದೂರು ನೀಡಿದರೂ ಪೊಲೀಸರು ಕೇಸು ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಜೈನ್ ಸಮುದಾಯ ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ತಲೆದೋರಿದೆ. ಈಗಲೂ ಪೊಲೀಸರು ಕೇಸು ದಾಖಲಿಸಿ ಕ್ರಮ ಕೈಗೊಳ್ಳದಿದ್ದರೆ ರಾಜ್ಯವ್ಯಾಪಿ ಹೋರಾಟ ಕೈಗೆತ್ತಿಕೊಳ್ಳಲಾಗುವುದು. ಅಲ್ಲದೆ ಎಲ್ಲ ಪೊಲೀಸ್ ಠಾಣೆಗಳಲ್ಲೂ ದೂರು ದಾಖಲಿಸಲಾಗುವುದು ಎಂದು ಪ್ರತಿಭಟನಾನಿರತರು ಎಚ್ಚರಿಕೆ ನೀಡಿದರು.
ಹಿಂದು ಮತ್ತು ಜೈನರು ಒಗ್ಗಟ್ಟಾಗಿ ಜೀವನ ನಡೆಸುತ್ತಿದ್ದಾರೆ. ಸಮಾಜದಲ್ಲಿ ಯಾವುದೇ ಗೊಂದಲ ಇಲ್ಲ, ಆದರೂ ಮಹೇಶ್ ಶೆಟ್ಟಿ ಅವರು ಹಿಂದು ಧರ್ಮವನ್ನು ಒಡೆಯುವ ಕೃತ್ಯಕ್ಕೆ ಕೈಹಾಕುತ್ತಿದ್ದಾರೆ. ಇದಕ್ಕೆ ಎಂದಿಗೂ ಅವಕಾಶ ನೀಡುವುದಿಲ್ಲ. ವರ್ಗ ಸಂಘರ್ಷಕ್ಕೆ ಯತ್ನಿಸುತ್ತಿರುವ ಮಹೇಶ್ ಶೆಟ್ಟಿಯನ್ನು ಕೂಡಲೇ ಪೊಲೀಸರು ಬಂಧಿಸಬೇಕು. ಇಂತಹ ಭಾಷಣಗಳಿಗೆ ಅವಕಾಶ ನೀಡಬಾರದು. ಪೊಲೀಸರೇ ಸ್ವಯಂ ಆಗಿ ಕೇಸು ದಾಖಲಿಸಲು ಮುಂದಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಜೈನರು ಅಹಿಂಸೆ, ಶಾಂತಿ ಪ್ರಿಯರು. ಜೈನ್ ಸಮುದಾಯದ ನಿಂದನೆಗೆ ಸರ್ಕಾರ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ತೆರಳಿ, ಮಹೇಶ್ ಶೆಟ್ಟಿ ವಿರುದ್ಧ ಕೇಸು ದಾಖಲಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು. ಜಿಲ್ಲಾಧಿಕಾರಿ ಹಾಗೂ ಪಶ್ಚಿಮ ವಲಯ ಪೊಲೀಸ್ ವರಿಷ್ಠಾಧಿಕಾರಿಗೂ ಮನವಿ ಸಲ್ಲಿಸಲಾಯಿತು.

Previous articleಸ್ನೇಹ, ಪ್ರೇಮದ ನಾಟಕವಾಡಿ ಮಹಿಳೆಯರನ್ನು ವಂಚಿಸಿದ ಆರೋಪಿ ಸೆರೆ
Next articleಬಿಜೆಪಿ ಅಭ್ಯರ್ಥಿಗಳ ಹೆಸರು ಅಂತಿಮ