ಹುಬ್ಬಳ್ಳಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಿ.ಟಿ. ರವಿ ಅವರು ಬಳಸಿರುವ ಪದವನ್ನು ನಾನು ಖಂಡಿಸುತ್ತೇನೆ. ಭಾರತದ ಸಂಸ್ಕೃತಿಯಲ್ಲಿ ಈ ರೀತಿಯ ಪದ ಬಳಕೆ ಶೋಭೆ ತರುವುದಿಲ್ಲ ಎಂದು ಸಚಿವ ಸಂತೋಷ ಲಾಡ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವೆ ಹೆಬ್ಬಾಳ್ಕರ್ ಅವರು ರವಿ ಅವರ ಮಾತಿನಿಂದ ನೊಂದಿದ್ದಾರೆ. ಒಬ್ಬ ಮಹಿಳೆ ಮಾಡಿರುವ ಆರೋಪದ ವಿರುದ್ಧ ಬಿಜೆಪಿಗರು ಹೋರಾಟ ಮಾಡುತ್ತಿದ್ದಾರೆ. ಅದು ಸುಳ್ಳು ಆರೋಪ ಎಂದು ವಾದಿಸುತ್ತಿದ್ದಾರೆ. ಯಾರೂ ಈ ರೀತಿಯ ಆರೋಪವನ್ನು ತಮ್ಮ ಮೇಲೆ ತಾವೇ ಮಾಡಿಕೊಳ್ಳುವುದಿಲ್ಲ ಎಂಬುದನ್ನು ಬಿಜೆಪಿಗರು ಅರಿತುಕೊಳ್ಳಬೇಕು ಎಂದರು.
ಬಿಜೆಪಿಯ ನೈತಿಕತೆ ಈ ವಿಚಾರದಲ್ಲಿ ಎದ್ದು ಕಾಣುತ್ತಿದೆ. ಕರ್ನಾಟಕ ಗೂಂಡಾ ರಾಜ್ಯ, ಪಾಕಿಸ್ತಾನ ಆಗಿದೆ ಎಂದು ಬೊಬ್ಬೆ ಹಾಕುವ ಬಿಜೆಪಿ ನಾಯಕರು ಇಂತಹ ಶಬ್ಧವನ್ನು ಪ್ರಯೋಗಿಸಬಹುದಾ ಎಂದು ಪ್ರಶ್ನಿಸಿದರು. ಅಲ್ಲದೆ, ಮುಸಲ್ಮಾನ, ಪಾಕಿಸ್ತಾನ, ಅಫ್ಘಾನಿಸ್ತಾನ ಬಿಟ್ಟರೆ ಇವರಿಗೆ ಬೇರೇನೂ ಗೊತ್ತಿಲ್ಲ ಎಂದು ಕಿಡಿಕಾರಿದರು.
ರವಿ ವಿರುದ್ಧ ಕೊಲೆಯ ಆರೋಪ ಮಾಡಿದಾಗ ದೂರು ಕೊಡಲಿ. ಅದನ್ನು ಬಿಟ್ಟು ಅವಾಚ್ಯ ಶಬ್ಧ ಪ್ರಯೋಗ ಸರಿಯಾದ ಕ್ರಮವಲ್ಲ. ಆರ್‌ಎಸ್‌ಎಸ್ ಮತ್ತು ಬಿಜೆಪಿ ಯಾವ ಮಹಿಳೆ ಬಗ್ಗೆ ಗೌರವ ಇಟ್ಟಿದೆ..? ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಪಾರ್ಲಿಮೆಂಟ್ ನೂತನ ಕಟ್ಟಡಕ್ಕೆ ರಾಷ್ಟ್ರಪತಿಗಳನ್ನು ಏಕೆ ಕರೆದುಕೊಂಡು ಹೋಗಲಿಲ್ಲ..? ಎಂದ ಅವರು, ರಾಮ ಮಂದಿರ ಪೂಜೆ ಮಾಡೋಕೆ ಮೋದಿ ಅವರಿಗೆ ಹೇಗೆ ಬಿಟ್ಟರು..? ಎಂದು ಪ್ರಶ್ನಿಸಿದರು.