ವನ್ಯಜೀವಿ ಹಾಗೂ ಮಾನವ ಸಂಘರ್ಷಗಳು ಉಂಟಾಗುವುದನ್ನು ತಡೆಯಲು ರೂಪಿಸಿರುವ ನಿಯಮಗಳನ್ನು ಉಲ್ಲಂಘಿಸಿˌ ಕಾಂಗ್ರೆಸ್ ಸರ್ಕಾರ ಯಾರನ್ನು ಮೆಚ್ಚಿಸಲು ಹೊರಟಿದೆ?
ಬೆಂಗಳೂರು: ನಿಷೇಧಿತ ಪ್ರದೇಶದಲ್ಲಿ ಸಿನಿಮಾ ಶೂಟಿಂಗ್’ಗೆ ಅವಕಾಶ ನಿಡಿದ ರಾಜ್ಯ ಸರ್ಕಾರದ ನಡೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಖಂಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಹೈಕಮಾಂಡ್ ಒತ್ತಾಯಕ್ಕೆ ಮಣಿದು ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ನಿಷೇದಾಜ್ಞೆಯನ್ನು ಹಿಂಪಡೆಯಲು ಹೊರಟಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ ಇದೀಗ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಸಿನಿಮಾ ಚಿತ್ರೀಕರಣಕ್ಕೆ, ಖಾಸಗಿ ವಾಹನಗಳ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿದೆ. ವನ್ಯಜೀವಿ ಸೂಕ್ಷ್ಮ ಪ್ರದೇಶದಲ್ಲಿ ಸಾರ್ವಜನಿಕ ವಾಹನಗಳಿಗೆ ನಿಷೇಧವಿದ್ದರೂ ನಿಯಮ ಉಲ್ಲಂಘನೆ ಮಾಡಿ ಅರಣ್ಯ ಇಲಾಖೆ ಶೂಟಿಂಗ್ ಗೆ ಅವಕಾಶ ಮಾಡಿ ಕೊಟ್ಟಿದೆ. ಕೇರಳ ರಾಜ್ಯದ ವಾಹನಗಳನ್ನು ಬಿಟ್ಟು ಸಿನಿಮಾ ಶೂಟಿಂಗ್ ಮಾಡಲು ಅರಣ್ಯ ಇಲಾಖೆ ಅನುಮತಿ ಕೊಟ್ಟಿದೆ.
ಮೇಲ್ನೋಟಕ್ಕೆ ಇದೆಲ್ಲವೂ ಕರ್ನಾಟಕ ಸರ್ಕಾರ ಬಂಡಿಪುರವನ್ನು ಕೇರಳದ ಸುಪರ್ದಿಗೆ ಕೊಟ್ಟಂತೆ ಕಾಣುತ್ತಿದೆ. ಸಾರ್ವಜನಿಕರುˌ ಪರಿಸರ ಪ್ರೇಮಿಗಳು “ಬಂಡಿಪುರ ಉಳಿಸಿ” ಎಂಬ ಅಭಿಯಾನ ನಡೆಸುತ್ತಿದ್ದಾರೆˌ ಆದರೆ ರಾಜ್ಯ ಸರ್ಕಾರ ನಿಷೇಧಿತ ಪ್ರದೇಶದಲ್ಲಿ ಸಿನಿಮಾ ಶೂಟಿಂಗ್’ಗೆ ಅವಕಾಶ ನಿಡುತ್ತಿದೆ. ಪರಿಸರ ಹಾಗೂ ವನ್ಯ ಜೀವಿಗಳ ಸಂರಕ್ಷಣೆˌ ಅರಣ್ಯೀಕರಣದ ವಿಚಾರಗಳನ್ನೇ ಮರೆತಿರುವ ರಾಜ್ಯ ಸರ್ಕಾರ ದೇಶದ ಪ್ರತಿಷ್ಠಿತ ಅರಣ್ಯ ಪ್ರದೇಶವಾದ ಬಂಡಿಪುರವನ್ನು ಸಂರಕ್ಷಿಸಿˌ ಬೆಳೆಸುವಲ್ಲಿ ವಿಫಲವಾಗುತ್ತಿದೆ. ದಿನಕ್ಕೊಂದು ಗೊಂದಲಗಳನ್ನು ಸೃಷ್ಟಿಸುವ ಮೂಲಕ ಜನರ ಹಾಗೂ ರೈತರ ಆಕ್ರೋಶಕ್ಕೆ ಕಾರಣವಾಗುತ್ತಿದೆ.
ನಮ್ಮ ಭವಿಷ್ಯದ ಸ್ವಚ್ಛ ಉಸಿರನ್ನು ಕಾಪಾಡಲುˌ ಅದನ್ನು ಮುಂದಿನ ಪೀಳಿಗೆಗೆ ನೀಡಲು ಈ ಅರಣ್ಯ ಪ್ರದೇಶಗಳು ಉಳಿಬೇಕು ಹಾಗೂ ಬೆಳಿಯಲು ಬಿಡಬೇಕು. ಪರಿಸರದ ಸಮತೋಲನವನ್ನು ಕಾಪಾಡುವ ವನ್ಯ ಜೀವಿಗಳ ಸಂತತಿ ಅಳಿವಿನಂಚಿನಲ್ಲಿರುವಾಗˌ ವನ್ಯಜೀವಿ ಹಾಗೂ ಮಾನವ ಸಂಘರ್ಷಗಳು ಉಂಟಾಗುವುದನ್ನು ತಡೆಯಲು ರೂಪಿಸಿರುವ ನಿಯಮಗಳನ್ನು ಉಲ್ಲಂಘಿಸಿˌ ಕಾಂಗ್ರೆಸ್ ಸರ್ಕಾರ ಯಾರನ್ನು ಮೆಚ್ಚಿಸಲು ಹೊರಟಿದೆ? ಇಂತಹ ಸಂರಕ್ಷಿತ ಪ್ರದೇಶಗಳಲ್ಲಿ ಖಾಸಗಿ ವಾಹನದ ಓಡಾಟಕ್ಕೆˌ ಚಿತ್ರೀಕರಣದ ಕ್ರಿಯೆಗಳನ್ನು ನಡೆಸಲು ರಾಜ್ಯ ಅರಣ್ಯ ಇಲಾಖೆ ಯಾವ ಆಧಾರದ ಮೇಲೆ ಅನುಮತಿ ನೀಡಿದೆ? ಇದು ಸಚಿವರ ಹಾಗೂ ಕೇರಳ ಕಾಂಗ್ರೆಸ್ ನಾಯಕರ ಒಳ ಒಪ್ಪಂದವೇ? ತಮ್ಮವರಿಗೊಂದು ನ್ಯಾಯˌ ಜನತೆಗೊಂದು ನ್ಯಾಯ ಎಂಬಂತೆ ತಾನು ಏನು ಮಾಡಿದರೂ ಸರಿ ಎಂದು ದುರಾಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರದ ನಡೆಗೆ ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದಿದ್ದಾರೆ.