ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರ ಮಾಡಿರುವ ಹಗರಣಗಳನ್ನು ಮುಚ್ಚಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧಪಕ್ಷಗಳ ಮೇಲೆ ತನಿಖೆಯ ಗುಮ್ಮ ಬಿಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.
ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2012 ನಡೆದಿದ್ದ ಹಗರಣಗಳ ಬಗ್ಗೆ ಸಿದ್ದರಾಮಯ್ಯ ಈಗ ಪ್ರಸ್ತಾಪ ಮಾಡುತ್ತಿದ್ದಾರೆ. 21 ಪ್ರಕರಣಗಳ ತನಿಖೆ ಮಾಡಿಸಿ, ಎಲ್ಲರನ್ನೂ ಜೈಲಿಗೆ ಕಳಿಸುತ್ತೇವೆ ಎನ್ನುವ ಸಿದ್ದರಾಮಯ್ಯ, ಹಿಂದೆಯೂ 5 ವರ್ಷ ಅಧಿಕಾರದಲ್ಲಿದ್ದರು. ಈಗ ಮತ್ತೆ ಸಿಎಂ ಆಗಿ ಒಂದು ವರ್ಷವಾಗಿದೆ. ಕಳೆದ ಒಂದು ವರ್ಷದಿಂದ ಸಿದ್ದರಾಮಯ್ಯ ಏನು ಮಾಡುತ್ತಿದ್ದರು. ಇವರು ಮಾಡಿದ ತಪ್ಪುಗಳನ್ನು ಮುಚ್ಚಿಕೊಳ್ಳಲು ವಿರೋಧಪಕ್ಷಗಳ ಮೇಲೆ ತನಿಖೆಯ ಗುಮ್ಮ ಬಿಡ್ತಿದ್ದಾರೆ ಅಷ್ಟೆ ಎಂದು ಆರೋಪಿಸಿದರು.
ಡೆತ್ ನೋಟ್‌ನಲ್ಲಿ ಮಂತ್ರಿಗಳು ಮೌಖಿಕವಾಗಿ ಆದೇಶ ಮಾಡಿದ್ದರು ಅಂತ ಅಧಿಕಾರಿ ಹೇಳಿದ್ದಾರೆ. ಇದರ ಬಗ್ಗೆ ಮಂತ್ರಿಗಳಿಗೆ ಗೊತ್ತಿರಲಿಲ್ಲವೇ. ಸಿಎಂ ಈ ರೀತಿ ಉಡಾಫೆ ಉತ್ತರ ಕೊಡುವುದು ಸರಿಯಲ್ಲ. ವಿಧಾನಸಭೆ ಕಲಾಪದಲ್ಲಿ ಯಾರೊ ಕೈಲಿ ಬರೆದುಕೊಟ್ಟದ್ದನ್ನು ಓದಿದ್ದಾರೆ.
ನಮ್ಮ ರಾಜ್ಯದಲ್ಲಿ ಈ ರೀತಿಯ ಆಡಳಿತ ನಿರೀಕ್ಷಿಸಲಿಲ್ಲ ಎಂದು ಕಿಡಿ ಕಾರಿದರು.