ಬೆಂಗಳೂರು: ಬೆಂಗಳೂರು ಕಾಲ್ತುಳಿತ ಪ್ರಕರಣ ಕುತ್ತಿಗೆಗೆ ಬರುತ್ತಿದ್ದಂತೆ ಕೆಎಸ್ಸಿಎ ಸಂಸ್ಥೆಯನ್ನ ಬಲಿಪಶು ಮಾಡಲು ಹೊರಟಿರುವ ಸಿಎಂ ಸಿದ್ದರಾಮಯ್ಯ ಸರ್ಕಾರದ ಮುಂದಿನ ಭಾಗವಾಗಿ ಡಿಸಿಎಂ ಡಿ. ಕೆ. ಶಿವಕುಮಾರ ಅವರು ಜಾಹೀರಾತು ತೆರಿಗೆ ಬಾಕಿ ನೆಪದಲ್ಲಿ ಬಿಬಿಎಂಪಿ ಮೂಲಕ KSCA ಸಂಸ್ಥೆಯ ನಟ್ಟು ಬೋಲ್ಟು ಟೈಟು ಮಾಡಲು ಮುಂದಾಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಕಾಂಗ್ರೆಸ್ ಸರ್ಕಾರದ ಭದ್ರತಾ ವೈಫಲ್ಯದಿಂದ ಅಮಾಯಕರು ಬಲಿಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ ಮಾತನಾಡಿ ವಿಧಾನಸೌಧದ DCP ಅವರು ಐಪಿಎಲ್ ವಿಜಯೋತ್ಸವ ಆಯೋಜಿಸಲು ಹೆಚ್ಚಿನ ಕಾಲಾವಕಾಶ, ಪೂರ್ವಸಿದ್ಧತೆ, ಮುಂಜಾಗ್ರತಾ ಕ್ರಮಗಳು ಅಗತ್ಯವಿದೆ ಎಂದು ಬುಧವಾರದಂದು (04-06-2025) ಸರಕಾರಕ್ಕೆ ಬರೆದ ಪತ್ರದಲ್ಲಿ ಸ್ಪಷ್ಟವಾಗಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿಗಳ ಈ ಲಿಖಿತ ಎಚ್ಚರಿಕೆಯನ್ನೂ ಕಡೆಗಣಿಸಿ ವಿಜಯೋತ್ಸವ ಆಚರಿಸಲು ಮುಂದಾಗಿದ್ದು ಯಾಕೆ? ಪೊಲೀಸ್ ಅಧಿಕಾರಿಗಳ ಎಚ್ಚರಿಕೆಯನ್ನೂ ಲೆಕ್ಕಿಸದೆ ವಿಜಯೋತ್ಸವ ಆಚರಿಸಲು ಹಠಕ್ಕೆ ಬಿದ್ದಿದ್ದು ಯಾರು? ಸಿಎಂ ಸಿದ್ದರಾಮಯ್ಯ ಹಾಗು ಗೃಹ ಸಚಿವ ಪರಮೇಶ್ವರ ಅವರು ಉತ್ತರಿಸಬೇಕಾದ ಪ್ರಶ್ನೆಗಳು ಬಹಳಷ್ಟಿವೆ. ಆದರೆ ಒಂದಂತೂ ನೂರಕ್ಕೆ ನೂರು ಗ್ಯಾರೆಂಟಿ. ಇದೊಂದು ಸರ್ಕಾರಿ ಪ್ರಾಯೋಜಿತ ಕಾಲ್ತುಳಿತ, ಸರ್ಕಾರಿ ಪ್ರಾಯೋಜಿತ ಕೊಲೆ. ಮಾಡಿರುವ ತಪ್ಪನ್ನ ಒಪ್ಪಿಕೊಂಡು ರಾಜೀನಾಮೆ ಕೊಡುವ ಬದಲು ಒಂದು ತಪ್ಪನ್ನ ಮುಚ್ಚಿಕೊಳ್ಳಲು ತಪ್ಪಿನ ಮೇಲೆ ತಪ್ಪು ಮಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರ ಸರ್ವನಾಶ ಆಗುವುದರಲ್ಲಿ ಸಂಶಯವೇ ಇಲ್ಲ ಎಂದಿದ್ದಾರೆ.