90 ಮೀಟರ್ ದೂರ ಜಾವೆಲಿನ್ ಎಸೆದು ಹೊಸ ದಾಖಲೆ ಬರೆದ ನೀರಜ್ ಚೋಪ್ರಾ
ದೋಹಾ: ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಅವರು 90 ಮೀ. ದೂರ ಎಸೆದು ಹೊಸ ದಾಖಲೆಯೊಂದನ್ನು ಬರೆದಿದ್ದಾರೆ.
ದೋಹಾದಲ್ಲಿ ನಿನ್ನೆ ರಾತ್ರಿ ನಡೆದ ಡೈಮಂಡ್ ಲೀಗ್‌ನಲ್ಲಿ ನೀರಜ್ ಚೋಪ್ರಾ, ತಮ್ಮ 3ನೇ ಯತ್ನದಲ್ಲಿ 90.23 ಮೀ. ದೂರಕ್ಕೆ ಜಾವೆಲಿನ್ ಎಸೆದು, ರಾಷ್ಟ್ರೀಯ ದಾಖಲೆ ಬರೆದಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಡಬಲ್ ಪದಕ ಗೆದ್ದಿರುವ ನೀರಜ್ ಚೋಪ್ರಾ ಅವರು ಜಾವೆಲಿನ್ ಎಸೆತದಲ್ಲಿ 90 ಮೀಟರ್‌ಗೂ ದೂರ ಎಸೆದು ಈ ಸಾಧನೆ ಮಾಡಿದ ಏಷ್ಯಾದ ಮೂರನೇ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. 2022 ರ ಸ್ಟಾಕ್‌ಹೋಮ್ ಡೈಮಂಡ್ ಲೀಗ್‌ನಲ್ಲಿ ನೀರಜ್ ಚೋಪ್ರಾ 89.94 ಮೀಟರ್ ಎಸೆದಿದ್ದು ಇದುವರೆಗಿನ ದಾಖಲೆಯಾಗಿತ್ತು.
ಡೈಮಂಡ್ ಲೀಗ್ ಕೂಟದಲ್ಲಿ ಜರ್ಮನಿಯ ಜೂಲಿಯನ್ ವೆಬರ್ 91.06 ಮೀಟರ್ ದೂರದೊಂದಿಗೆ ಮೊದಲ ಸ್ಥಾನ ಗಳಿಸಿದರೆ, ನೀರಜ್ ಚೋಪ್ರಾ ಅವರು, 90.23 ಮೀಟರ್‌ನೊಂದಿಗೆ 2ನೇ ಸ್ಥಾನ ಅಲಂಕರಿಸಿದರು. ಗ್ರೆನೇಡಿಯನ್ ಆಂಡರ್ಸನ್ ಪೀಟರ್ಸ್ 85.64 ಮೀಟರ್‌ನೊಂದಿಗೆ ಮೂರನೇ ಸ್ಥಾನ ಪಡೆದರು.
ಪ್ರಧಾನಿ ಮೋದಿಯಿಂದ ಶುಭಾಶಯ: ಡೈಮಂಡ್ ಲೀಗ್ ಕೂಟದಲ್ಲಿ 90 ಮೀ. ದೂರ ಎಸೆದು ಸಾಧನೆ ಮಾಡಿರುವ ನೀರಜ್ ಚೋಪ್ರಾ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣ ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ. ಡೈಮಂಡ್ ಲೀಗ್ ಕೂಟದಲ್ಲಿ ಜಾವೆಲಿನ್ ಅನ್ನು 90.23 ಮೀಟರ್ ದೂರ ಎಸೆದು, ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿರುವ ನೀರಜ್ ಚೋಪ್ರಾ ಅವರಿಗೆ ಅಭಿನಂದನೆಗಳು. ಇದು ಅವರ ನಿರಂತರ ಸಮರ್ಪಣೆ, ಶಿಸ್ತು ಮತ್ತು ಉತ್ಸಾಹದ ಫಲಿತಾಂಶವಾಗಿದೆ. ಅವರ ಸಾಧನೆಗೆ ದೇಶ ಹೆಮ್ಮೆಪಡುತ್ತದೆ ಎಂದಿದ್ದಾರೆ.