ಹುಬ್ಬಳ್ಳಿ: ಸಚಿವ ಸಂಪುಟ ಸಭೆ ಆದ ಬಳಿಕ ಊಟಕ್ಕೆ ಕರೆಯುತ್ತಾರೆ. ಅದೇ ರೀತಿ ಸಚಿವ ಸತೀಶ ಜಾರಕಿಹೊಳಿ ಅವರು ಊಟಕ್ಕೆ ಕರೆದಿದ್ದರು. ಇದಕ್ಕೆ ಮಾಧ್ಯಮದವರು ದಯವಿಟ್ಟು ಬೇರೆ ಅರ್ಥ ಕಲ್ಪಿಸಬೇಡಿ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ನಿರ್ಧಾರ ಸಚಿವ, ಶಾಸಕರು ಮಾಡುತ್ತಾರೆಯೇ? ಅದೇನಿದ್ದರೂ ಹೈಕಮಾಂಡ್ ನಿರ್ಧಾರ ಎಂದು ಕಾರ್ಮಿಕ ಖಾತೆ ಸಚಿವ ಸಂತೋಷ ಲಾಡ್ ಹೇಳಿದರು.
`ಕಾಗೆ ಕೂಡ್ರುವುದಕ್ಕೂ ಗಿಡದ ಟೊಂಗೆ ಮುರಿಯುವುದಕ್ಕೂ’ ಸರಿಹೋಯ್ತು ಎಂದು ಹೇಳುತ್ತಾರಲ್ಲ ಹಾಗಾಗಿದೆ. ಇದೆಲ್ಲ ಕಾಕತಾಳೀಯವಷ್ಟೇ. ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ವಿದೇಶ ಪ್ರವಾಸದಲ್ಲಿದ್ದಾರೆ. ಸಚಿವ ಸಂಪುಟ ಸಭೆ ಆದ ಬಳಿಕ ಸಚಿವ ಜಾರಕಿಹೊಳಿ ಅವರು ಡಿನ್ನರ್ ಪಾರ್ಟಿಗೆ ಕರೆದಿದ್ದರು. ಹೋಗಿ ಊಟ ಮಾಡಿದ್ದೇವೆ. ಅಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಗ್ಗೆ ಚರ್ಚೆ ನಡೆಯಿತು ಎಂಬುದೆಲ್ಲ ಸುಳ್ಳು. ಮಾಧ್ಯಮ ಸೃಷ್ಟಿ ಅಷ್ಟೇ ಎಂದು ಸಚಿವ ಲಾಡ್ ಪ್ರತಿಕ್ರಿಯಿಸಿದರು.