ಹುಬ್ಬಳ್ಳಿ: ಸಂವಿಧಾನ ತಿದ್ದುಪಡಿ ಮಾಡುವ ವಿಚಾರವಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೀಡಿರುವ ಹೇಳಿಕೆ ಖಂಡಿಸಿ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು. ಅಲ್ಲದೆ, ಡಿ.ಕೆ. ಶಿವಕುಮಾರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಮತ್ತು ಡಿ.ಕೆ. ಶಿವಕುಮಾರ ವಿರುದ್ಧ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು, ಕೆಲ ಕಾಲ ಬಾಯಿ ಬಡಿದುಕೊಂಡು, ಅಣಕು ಶವಯಾತ್ರೆ ನಡೆಸಿದರು.
ಬಳಿಕ ಪ್ರತಿಭಟನೆಯನ್ನುದ್ದೇಶಿ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ, ಒಂದು ವರ್ಗದವರ ಹಿತಕ್ಕಾಗಿ ಸಂವಿಧಾನಕ್ಕೆ ವಿರುದ್ಧವಾಗಿ ಮೀಸಲಾತಿ ನೀಡಿದ್ದಾಗಿದೆ. ಈಗ ಅವರ ಏಳಿಗೆಗಾಗಿ ಸಂವಿಧಾನವನ್ನೆ ಬದಲಾಯಿಸುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಕಾಂಗ್ರೆಸ್ ಓಲೈಕೆ ಹಾಗೂ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ನಾಳೆ ಭಾರತವನ್ನೇ ತುಂಡರಿಸುತ್ತದೆ ಎಂಬುದಕ್ಕೆ ಡಿ.ಕೆ. ಶಿವಕುಮಾರ್ ಅವರ ಈ ಹೇಳಿಕೆಯೇ ಸಾಕ್ಷಿ ಎಂದು ಕಿಡಿಕಾರಿದರು.
ಕಾಂಗ್ರೆಸ್ ಇರುವುದು ಒಂದು ಕೋಮಿನ ಹಿತ ಕಾಯಲು ಮಾತ್ರ ಎಂಬ ವಾಸ್ತವ ಸ್ಥಿತಿಯನ್ನು ಅರಿಯಬೇಕಿದೆ. ಈಗಾಗಲೇ ಪರಿಶಿಷ್ಟರ ಕಲ್ಯಾಣ ಕಾರ್ಯಕ್ಕಾಗಿ ನಿಗದಿಯಾಗಿದ್ದ ಅನುದಾನವನ್ನು ಕಾಂಗ್ರೆಸ್ ತನ್ನ ಬಿಟ್ಟಿ ಭಾಗ್ಯಗಳ ಯೋಜನೆಗೆ ಬಳಸಿಕೊಂಡು, ಬ್ಯಾಂಕ್ ನಲ್ಲಿ ಠೇವಣಿ ಇಟ್ಟಿದ್ದ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣಕ್ಕೂ ಕನ್ನ ಹಾಕಿದೆ. ಹಿಂದುಳಿದ ವರ್ಗಗಳ ನಿಗಮಗಳಿಗೆ ಕನಿಷ್ಠ ಮಟ್ಟದ ಅನುದಾನವನ್ನೂ ಬಿಡುಗಡೆ ಮಾಡದೇ `ಹಿಂದು’ ವಿರೋಧಿ ಎನ್ನುವುದನ್ನು ಸಾಬೀತುಪಡಿಸಿಕೊಂಡಿದೆ. ಇದೀಗ ಮೀಸಲಾತಿ ಕೊಡಲು ಸಂವಿಧಾನದ ಆಶಯಗಳನ್ನು ಮೂಲೆಗೆ ಸರಿಸಿ, ಸಂವಿಧಾನವನ್ನೇ ಬುಡಮೇಲು ಮಾಡಲು ಸಿದ್ದ ಎಂಬಂತೆ ಕಾಂಗ್ರೆಸ್ಸಿಗರು ನಡೆದುಕೊಳ್ಳುತ್ತಿದ್ದಾರೆ. ಸಂವಿಧಾನ ವಿರೋಧಿಗಳ್ಯಾರು? ಸಂವಿಧಾನವನ್ನು ಬದಲಾಯಿಸುವವರು ಯಾರು? ಸಂವಿಧಾನವನ್ನು ಇದುವರೆಗೂ ಅತಿ ಹೆಚ್ಚು ಬಾರಿ ತಿದ್ದುಪಡಿ ಮಾಡಿದವರು ಯಾರು? ಎಂಬ ಪ್ರಶ್ನೆಗಳಿಗೆ ನಿಶ್ಚಿತವಾಗಿಯೂ ಕಾಂಗ್ರೆಸ್ ನೀಡಬೇಕು. ಅಲ್ಲದೆ, ಸಂವಿಧಾನದ ತಿದ್ದುಪಡಿಯ ಬಗ್ಗೆ ಹೇಳಿಕೆ ನೀಡಿರುವ ಡಿ.ಕೆ.ಶಿವಕುಮಾರ ಅವರನ್ನು ತಕ್ಷಣ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.