ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ, ಹಿರಿಯ ಸಾಹಿತಿ, ವಿದ್ಯಾವಾಚಸ್ಪತಿ ಡಾ. ಪಂಚಾಕ್ಷರಿ ಹಿರೇಮಠ(೯೨) ಶುಕ್ರವಾರ ನಿಧನರಾದರು.
ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧುಗಳಿದ್ದಾರೆ.
ಬಿಸರಹಳ್ಳಿಯಲ್ಲಿ ಆರಂಭಿಕ ಶಿಕ್ಷಣ, ನಂತರ ಕೊಪ್ಪಳಕ್ಕೆ ಬಂದರು. ಭಾರತ ಸ್ವತಂತ್ರವಾದರೂ ಸಹ ನಿಜಾಮಶಾಹಿ ಆಳ್ವಿಕೆಯಲ್ಲಿದ್ದ ಕೊಪ್ಪಳದಲ್ಲಿ ದಬ್ಬಾಳಿಕೆ ನಡೆದಿತ್ತು. ಸ್ವಾಮಿ ರಮಾನಂದ ತೀರ್ಥರ ಮುಂದಾಳುತ್ವದಲ್ಲಿ ಹೈ-ಕ ವಿಮೋಚನಾ ಚಳವಳಿ ಆರಂಭವಾಗಿತ್ತು. ವಿಮೋಚನೆಯಾದ ಬಳಿಕ ಬಿಸರಹಳ್ಳಿಗೆ ಮರಳಿದ ಪಂಚಾಕ್ಷರಿ ಅವರು ಕೊಪ್ಪಳ, ಕಲಬುರಗಿ ಸುತ್ತಾಡಿ ಕೊನೆಗೆ ಧಾರವಾಡಕ್ಕೆ ಬಂದರು. ಸ್ವಾಧ್ಯಾಯ ಬಲದಿಂದಲೇ ಸ್ನಾತಕೋತ್ತರ ಪದವಿ ಪಡೆದರು. 1985ರಲ್ಲಿ ಅಮೆರಿಕೆಯ ಅರಿಝೋನಾ ಜಾಗತಿಕ ವಿಶ್ವವಿದ್ಯಾಲಯದಿಂದ ಡಿ.ಲಿಟ್ ಪದವಿಯನ್ನು ಪಡೆದ ಪ್ರಥಮ ಕನ್ನಡಿಗರು
ಪತ್ರಕರ್ತರಾಗಿ, ಪ್ರಕಾಶಕರಾಗಿ, ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ. ಕನ್ನಡ, ಉರ್ದು, ಹಿಂದಿ, ಗುಜರಾತಿ ಭಾಷೆಯಲ್ಲೂ ಸಾಹಿತ್ಯ ರಚಿಸಿದ್ದಾರೆ. ಮಾತ್ರವಲ್ಲ; ರಷ್ಯಾ, ಜಾರ್ಜಿಯಾ ಹಾಗೂ ಉಝೇಕಿಸ್ತಾನ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಹಲವು ವರ್ಷಗಳ ಕಾಲ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಡಾ. ಪಂಚಾಕ್ಷರಿ ಹಿರೇಮಠ ಅವರು ಸಾಹಿತ್ಯ ಕ್ಷೇತ್ರಕ್ಕೆ ಅಗಾಧ ಕೊಡುಗೆ ನೀಡಿದ್ದಾರೆ. ಹಲವು ಕೃತಿಗಳನ್ನು ಅನುವಾದ ಮಾಡಿದ್ದಾರೆ.
ಸಂಯುಕ್ತ ಕರ್ನಾಟಕದೊಂದಿಗೆ ಬಾಂಧವ್ಯ ಹೊಂದಿದ್ದ ಪಂಚಾಕ್ಷರಿ ಹಿರೇಮಠ ಅವರ ನೂರಾರು ಲೇಖನಗಳು ಸಂಯುಕ್ತ ಕರ್ನಾಟಕ ಹಾಗೂ ಕರ್ಮವೀರದಲ್ಲಿ ಪ್ರಕಟಗೊಂಡಿವೆ. ಕೊಪ್ಪಳ ಜಿಲ್ಲೆಯ ಬಿಸರಹಳ್ಳಿಯಲ್ಲಿ ಜನಿಸಿದರು. ಅಪ್ಪಟ ದೇಶಪ್ರೇಮಿಯಾದ ಪಂಚಾಕ್ಷರಿ ಹಿರೇಮಠ, ಬಹುಭಾಷಾ ವಿಶಾರದರು. ಅವರು ಕವಿ, ಕಥೆಗಾರ, ಪ್ರಬಂಧಕಾರ, ವಿಮರ್ಷಕ, ಅನುವಾದಕ, ವಾಗ್ಮಿ ಹಾಗೂ ಸಂಪಾದಕ. ಅವರ ಅನೇಕ ಕೃತಿಗಳು ಭಾರತೀಯ ಹಾಗೂ ವಿದೇಶಿ ಭಾಷೆಗಳಲ್ಲಿ ಅನುವಾದಗೊಂಡಿರುವುದು ಹೆಗ್ಗಳಿಕೆ.
ಪಂಚಾಕ್ಷರಿ ಹಿರೇಮಠ ಅವರಿಗೆ ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ(ಅನುವಾದ), ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕಮಲಾ ಗೊಯೆಂಕಾ ಫೌಂಡೇಶನ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ.