ಡಾ.ಎಸ್.ಆರ್. ಗುಂಜಾಳರಿಗೆ ‘ಬಸವ ರಾಷ್ಟ್ರೀಯ ಪುರಸ್ಕಾರ’

0
37

ದೇವರಾಜ ಬಹದ್ದೂರ್ ಪ್ರಶಸ್ತಿ, ತಪಶೆಟ್ಟಿ ಬಹುಮಾನ, ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ, ಶರಣ ಸಾಹಿತ್ಯ ಪ್ರಶಸ್ತಿ, ಸಾಹಿತ್ಯ ಶ್ರೀ ಪ್ರಶಸ್ತಿ, ಸೇವಾರತ್ನ ಪ್ರಶಸ್ತಿ  ಸೇರಿ ಹತ್ತಾರು ಗೌರವಗಳಿಗೆ ಭಾಜನರಾಗಿದ್ದಾರೆ

ಧಾರವಾಡ: ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ 2024-25ನೇ ಸಾಲಿನ ‘ಬಸವ ರಾಷ್ಟ್ರೀಯ ಪುರಸ್ಕಾರ’ಕ್ಕೆ ಸಾಹಿತಿ ಡಾ.ಎಸ್.ಆರ್. ಗುಂಜಾಳ ಆಯ್ಕೆಯಾಗಿದ್ದಾರೆ.
ಮಹಾನ್ ಮಾನವತಾವಾದಿ ಬಸವಣ್ಣನವರ ಹೆಸರಿನಲ್ಲಿ ನೀಡುವ ‘ಬಸವ ರಾಷ್ಟ್ರೀಯ ಪುರಸ್ಕಾರ’ವು 10 ಲಕ್ಷ ರೂ. ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಜಸ್ಟೀಸ್ ಎಚ್.ಎನ್. ನಾಗಮೋಹನದಾಸ್ ಅಧ್ಯಕ್ಷರಾಗಿರುವ ಆಯ್ಕೆ ಸಮಿತಿಯು ಡಾ.ಎಸ್.ಆರ್.ಗುಂಜಾಳರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಡಾ. ಎಸ್. ಆರ್. ಗುಂಜಾಳರವರು ಧಾರವಾಡ ಜಿಲ್ಲೆ ಕೋಳಿವಾಡ ಗ್ರಾಮದಲ್ಲಿ 1932ರಲ್ಲಿ ಜನಿಸಿದರು. ಗ್ರಂಥಾಲಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು, ಗುಲ್ಬರ್ಗಾ ವಿಶ್ವವಿದ್ಯಾನಿಲಯದ ಗ್ರಂಥಾಲಯ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಗ್ರಂಥಾಲಯಕ್ಕೆ ಸಂಬಂಧಿಸಿದಂತೆ-ಐವರು ಗ್ರಂಥಾಲಯ ವಿಜ್ಞಾನಿಗಳು, ಗ್ರಂಥಾಲಯು ವಿಜ್ಞಾನ ದರ್ಶನ, ಕರ್ನಾಟಕದಲ್ಲಿ ಗ್ರಂಥಾಲಯಗಳು, ಗ್ರಂಥಾಲಯ ದಿಗ್ಗಜರು, ಗ್ರಂಥಾಲಯ ವಿಜ್ಞಾನದ ಪಂಚಸೂತ್ರಗಳು, ಗ್ರಂಥಾಲಯದ ಅಂತರಂಗ, ಇಂಗ್ಲಿಷ್‌ನ 3ಕೃತಿ ಸೇರಿ 16 ಕೃತಿಗಳನ್ನು ಹೊರ ತಂದಿದ್ದಾರೆ. ಶರಣ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಹಲವಾರು ಕೃತಿಗಳನ್ನು ರಚನೆ ಮಾಡಿರುತ್ತಾರೆ. ಬಸವ ಸಾಹಿತ್ಯ ದರ್ಪಣ, ಬಸವ ಚಿಂತನ, ವಚನಕಾರರು ಮತ್ತು ವಚನಾಂಕಿತರು, ಸಮೃದ್ಧ ವಚನ ಸಾಹಿತ್ಯ, ವಚನಗಳ ಶುದ್ಧೀಕರಣ ಬಸವಣ್ಣನವರ ವಚನ ಪದಪ್ರಯೋಗ ಕೋಶ, ಹೀಗೆ ವಚನಕಾರರು ಮತ್ತು ವಚನ ಸಾಹಿತ್ಯಕ್ಕೆ ಸಂಬಂಧಿಸಿದ ಹಲವಾರು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಕಾಯಕಯೋಗಿ ಬಸವನಾಳ ಶಿವಲಿಂಗಪ್ಪನವರು, ಬಿ.ಡಿ. ಜತ್ತಿ ಬಾಳು-ಬದುಕು, ಎಚ್.ಎಫ್. ಕಟ್ಟೀಮನಿಯವರು, ಉತ್ತಂಗಿ ಚನ್ನಪ್ಪ, ಯಗಟಿ ವೀರಪ್ಪ ಅವರ ಪ್ರಮುಖ ಕೃತಿಗಳು. ಧಾರ್ಮಿಕ ಗ್ರಂಥಗಳು-ಅನುಭಾವಿಯ ಆತ್ಮಕಥನ, ಬಸವ ಚಿಂತನ, ಮಹಾಕವಿದ್ವಯರು, ವಚನಕಾರರು ಮತ್ತು ವಚನಾಂಕಿತರು, ಸುಖೀಜೀವನದ ಸೂತ್ರಗಳು, ಹಲವು ಸಂಪಾದಿತ, ಅನುವಾದಿತ ಮರಾಠಿ, ಇಂಗ್ಲಿಷ್ ಕೃತಿ ಸೇರಿದಂತೆ 75ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರ ಸಾಹಿತ್ಯ ಸೇವೆಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ, ದೇವರಾಜ ಬಹದ್ದೂರ್ ಪ್ರಶಸ್ತಿ, ತಪಶೆಟ್ಟಿ ಬಹುಮಾನ, ಶರಣ ಸಾಹಿತ್ಯ ಪ್ರಶಸ್ತಿ, ಸಾಹಿತ್ಯ ಶ್ರೀ ಪ್ರಶಸ್ತಿ, ಸೇವಾರತ್ನ ಪ್ರಶಸ್ತಿ ಸೇರಿ ಹತ್ತಾರು ಗೌರವಗಳಿಗೆ ಭಾಜನರಾಗಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರು ವಿವಿಧ ಪ್ರಶಸ್ತಿಗಳನ್ನು ಪ್ರಕಟಿಸಿದ್ದಾರೆ.

Previous articleರತ್ನಮಾನಸದ ಕಾಶ್ಮಿರ್ ಮಿನೆಜಸ್ ಇನ್ನಿಲ್ಲ
Next articleಪ್ರಯಾಣಿಕರಿಗೆ ಜೈ ಎಂದ ನಮ್ಮ ಮೆಟ್ರೋ…