ಡಬ್ಲ್ಯೂಟಿಸಿ ಫೈನಲ್‌ಗೆ ದಕ್ಷಿಣ ಆಫ್ರಿಕಾ ಲಗ್ಗೆ

ಸೆಂಚುರಿಯನ್: ಪಾಕಿಸ್ತಾನದ ವಿರುದ್ಧದ ಟೆಸ್ಟ್ ಸರಣಿ ಜಯದೊಂದಿಗೆ, ದಕ್ಷಿಣ ಆಫ್ರಿಕಾವು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಲಗ್ಗೆಯಿಟ್ಟಿದೆ. ಜೂನ್ ೧೧, ೨೦೨೫ ರಿಂದ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಪ್ರತಿಷ್ಠಿತ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ ಮತ್ತೊಮ್ಮೆ ಐಸಿಸಿ ಟ್ರೋಫಿಗಾಗಿ ಕಾದಾಟ ನಡೆಸಲಿದೆ.
ಪಾಕಿಸ್ತಾನದ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ೨ ವಿಕೆಟ್‌ಗಳ ರೋಚಕ ಜಯದೊಂದಿಗೆ, ಡಬ್ಲ್ಯೂಟಿಸಿ ಅಂಕಪಟ್ಟಿಯಲ್ಲಿ ಶೇ. ೬೬.೬೭% ಅಂಕದೊಂದಿಗೆ ಮೊದಲ ಸ್ಥಾನಕ್ಕೆ ಏರಿತು. ಮೊದಲ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನವನ್ನು ೨೧೧ ರನ್‌ಗಳಿಗೆ ಕಟ್ಟಿ ಹಾಕಿದ ಹರಿಣಗಳು, ೩೦೧ ರನ್‌ಗಳಿಸಿ ೯೦ ರನ್‌ಗಳ ಮುನ್ನಡೆ ಸಾಧಿಸಿತ್ತು. ೨ನೇ ಇನ್ನಿಂಗ್ಸ್‌ನಲ್ಲಿ ಪಾಕ್ ೨೩೭ ರನ್‌ಗಳಿಸಿ ಆಲೌಟ್ ಆಗಿತ್ತು. ಆದರೆ, ಪಾಕ್ ನೀಡಿದ್ದ ೧೫೦ ರನ್‌ಗಳ ಗುರಿಯನ್ನು ತಲುಪಲು ಆಫ್ರಿಕನ್ನರು ಪರದಾಡಿದರು. ಮೊಹಮ್ಮದ್ ಅಬ್ಬಾಸ್ ೬ ವಿಕೆಟ್‌ಗಳನ್ನು ಪಡೆದ ಪರಿಣಾಮ, ಗೆಲುವು ಕಠಿಣವಾಯಿತು. ೯ನೇ ವಿಕೆಟ್‌ಗೆ ೫೧ ರನ್‌ಗಳ ಜೊತೆಯಾಟ ಪಂದ್ಯವನ್ನು ರೋಚಕ ಹಂತಕ್ಕೆ ಕರೆದೊಯ್ಯಿತು. ಆದರೆ, ಬಾಲಂಗೋಚಿ ಕಾಗಿಸೋ ರಬಾಡ ೧೦ನೇ ಕ್ರಮಾಂಕದಲ್ಲಿ ಅಜೇಯ ೩೧ ರನ್‌ಗಳನ್ನು ಗಳಿಸುವ ಮೂಲಕ ದಕ್ಷಿಣ ಆಫ್ರಿಕಾಗೆ ೨ ವಿಕೆಟ್‌ಗಳ ಜಯ ತಂದಿಟ್ಟರು. ಈಗ ಡಬ್ಲ್ಯೂಟಿಸಿ ಫೈನಲ್ ಸ್ಥಾನಕ್ಕೆ ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳು ಕಾದಾಡಬೇಕಿದ್ದು, ಭಾರತ ಮೆಲ್ಬೋರ್ನ್ ಹಾಗೂ ಸಿಡ್ನಿ ಟೆಸ್ಟ್‌ಗಳನ್ನು ಗೆಲ್ಲಲೇಬೇಕಾಗಿದೆ.