ದೇವನಹಳ್ಳಿಯ ಫಾಕ್ಸ್’ಕಾನ್ ಘಟಕವು ಉದ್ಘಾಟನೆಗೆ ಸಿದ್ಧ!
ಬೆಂಗಳೂರು: ದೇವನಹಳ್ಳಿ ಐಟಿಐಆರ್‌ನಲ್ಲಿ ಇರುವ ಫಾಕ್ಸ್‌ಕಾನ್ ಘಟಕವು ಉದ್ಘಾಟನೆಗೆ ಸಿದ್ಧವಾಗಿದೆ. ಜೂನ್ ತಿಂಗಳ ಆರಂಭದಲ್ಲಿ ವಾಣಿಜ್ಯ ಐಫೋನ್’ಗಳ ರವಾನೆ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಇದು ಕೇವಲ ಇನ್ನೊಂದು ಉತ್ಪಾದನಾ ಮೈಲಿಗಲ್ಲಲ್ಲ – ಇದು ಒಂದು ಕಾರ್ಯತಂತ್ರದ ಬದಲಾವಣೆಯ ಸಂಕೇತ. ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಹಾಗೂ ಸುಂಕದ ಒತ್ತಡಗಳ ನಡುವೆಯೂ ಭಾರತವು ಆಪಲ್’ನ ಆದ್ಯತೆಯ ಉತ್ಪಾದನಾ ಕೇಂದ್ರವಾಗಿ ಬದಲಾಗುತ್ತಿದೆ. ಈ ಬೆಳವಣಿಗೆ ಜಾಗತಿಕ ಉತ್ಪಾದನೆಯಲ್ಲಿ ಕರ್ನಾಟಕದ ಸ್ಥಾನವನ್ನು ಇನ್ನಷ್ಟು ಬಲಪಡಿಸುತ್ತದೆ ಮತ್ತು ಪಾಲುದಾರರ ಹಿತಾಸಕ್ತಿಗೆ ಧಕ್ಕೆಯಾಗದ ರೀತಿಯಲ್ಲಿ ಹೆಚ್ಚಿನ ವಿದೇಶಿ ಹೂಡಿಕೆಗೆ ಬಾಗಿಲು ತೆರೆಯುತ್ತದೆ.
ಆಪಲ್ ಸಿಇಒ ಟಿಮ್ ಕುಕ್ ಅವರು ಜೂನ್ ತ್ರೈಮಾಸಿಕದಲ್ಲಿ, “ಅಮೇರಿಕಾದಲ್ಲಿ ಮಾರಾಟವಾಗುವ ಹೆಚ್ಚಿನ ಐಫೋನ್‌ಗಳು ಭಾರತದಲ್ಲಿ ತಯಾರಿಸಲ್ಪಡುತ್ತವೆ,” ಎಂದು ದೃಢಪಡಿಸಿದ್ದಾರೆ. ಒಬ್ಬ ಕನ್ನಡಿಗನಾಗಿ, ಇದು ಹೆಮ್ಮೆಯ ಕ್ಷಣ. ಮೈಸೂರಿನಿಂದ ಕ್ಯುಪರ್ಟಿನೊವರೆಗೆ — ಕರ್ನಾಟಕವು ಜಾಗತಿಕ ಸುದ್ದಿಗಳಿಗೆ ತೆರೆದುಕೊಳ್ಳುತ್ತಲೇಯಿದೆ ಎಂದಿದ್ದಾರೆ.