ದಾವಣಗೆರೆ: ಕಣ್ಣೆದುರಿಗೆ ರೈಲಿನ ಚಕ್ರಕ್ಕೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿದ್ದ ಅಂಗವಿಕಲ ಪ್ರಯಾಣಿಕನನ್ನು ಕರ್ತವ್ಯ ನಿರತ ಆರ್‌ಪಿಎಫ್ ಮುಖ್ಯ ಪೇದೆ ಸತೀಶ್ ಪ್ರಾಣ ರಕ್ಷಿಸಿರುವ ಘಟನೆ ಭಾನುವಾರ ರಾತ್ರಿ ೧೧.೩೨ರಲ್ಲಿ ಸುಮಾರಿನಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆ ಹಿಟ್ಟಿನಹಳ್ಳಿ ಗ್ರಾಮದ ಎಚ್.ಎನ್.ಪ್ರಶಾಂತ್ (೨೫) ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕ. ಪ್ರಶಾಂತ್, ಬೆಂಗಳೂರಿನ ಆಸ್ಪತ್ರೆಗೆ ಹೋಗಿ ಬಲಗಾಲಿನ ಅಳವಡಿಕೆಗೆ ಮಾಪನ ಮಾಡಿಸಿಕೊಳ್ಳಲು ಹೊಸಪೇಟೆಯಿಂದ ಯಶವಂತಪುರಕ್ಕೆ ಹೋಗುವ ವಿಶೇಷ ರೈಲು (ರೈಲು ಸಂಖ್ಯೆ: ೦೬೫೪೬) ಗಾಡಿಯಲ್ಲಿ ಪ್ರಯಾಣ ಬೆಳೆಸಿದ್ದರು. ಕಾರಣಾಂತರದಿಂದ ವೈದ್ಯರು ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಮನೆಗೆ ವಾಪಸ್ ಹೋಗಲು ನಿರ್ಧರಿಸಿ ಪುನಃ ಯಶವಂತಪುರದಿಂದ ವಿಜಯಪುರಕ್ಕೆ ಹೋಗುವ (ರೈಲು ಸಂಖ್ಯೆ:೦೬೫೪೫)
ವಿಶೇಷ ರೈಲಿನಲ್ಲಿ ಹೋಗಲು ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ರಾತ್ರಿ ೧೧.೩೨ ಗಂಟೆ ವೇಳೆಯಲ್ಲಿ ಚಲಿಸುತ್ತಿರುವ ರೈಲಿನಿಂದ ಇಳಿಯಲು ಯತ್ನಿಸಿದ್ದಾರೆ. ಸ್ಥಳದಲ್ಲೇ ಇದ್ದ ಆರ್‌ಪಿಎಫ್ ಮುಖ್ಯ ಪೇದೆ ಬಿ.ಎಸ್.ಸತೀಶ್, ಚಲಿಸುತ್ತಿರುವ ರೈಲಿನಿಂದ ಕೆಳಗೆ ಬೀಳುತ್ತಿರುವುದನ್ನು ಗಮನಿಸಿ ಪ್ರಾಣದ ಹಂಗು ತೊರೆದು ೨ನೇ ಪ್ಲಾಟ್‌ಫಾರ್ಮ್ ಬದಿಗೆ ಎಳೆದುಕೊಂಡು ವಿಕಲಾಂಗ ಪ್ರಯಾಣಿಕನ ಜೀವ ಉಳಿಸಿದ್ದಾರೆ. ಅಘಾತಕ್ಕೊಳಗಾಗಿದ್ದ ಅಂಗವಿಕಲ ಪ್ರಶಾಂತ್ ಅವರನ್ನು ಸಂತೈಸಿ, ಅವರಿಗೆ ಆತ್ಮಸ್ಥೈರ್ಯ ತುಂಬಿ ಸಮಾಧಾನ ಮಾಡಿದ್ದಾರೆ. ಬಳಿಕ ತಮ್ಮ ಗ್ರಾಮಕ್ಕೆ ವಾಪಸ್ ಆಗಲು ನೆರವಾಗಿದ್ದಾರೆ.