ಹುಬ್ಬಳ್ಳಿ: ಯಾವುದೇ ಹೊಸ ವಿಷಯ ಬಂದಾಗ ಪರ, ವಿರೋಧ ಸಾಮಾನ್ಯ. ಅಂತೆಯೇ ಜಾತಿ ಗಣತಿ ವಿಚಾರವಾಗಿ ಸ್ವಪಕ್ಷೀಯರಲ್ಲೇ ಅಸಮಾಧಾನವಿದೆ. ಇದನ್ನೆಲ್ಲ ಚರ್ಚಿಸಲು ವಿಶೇಷ ಅಧಿವೇಶನ ಕರೆಯುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದೇನೆ. ಶೀಘ್ರದಲ್ಲೇ ಈ ಸಂಬಂಧ ವಿಶೇಷ ಅಧಿವೇಶನ ಕರೆಯಲಿದ್ದಾರೆ ಎಂದು ಲೋಕೋಪಯೋಗಿ ಖಾತೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಹೊಸ ವರದಿ, ಕಾನೂನು ಜಾರಿಯಾದಾಗ ಅದನ್ನು ಯಾರೂ ಸುಲಭವಾಗಿ ಒಪ್ಪುವುದಿಲ್ಲ. ಕೆಲವರು ಬಹಿರಂಗವಾಗಿ, ಇನ್ನೂ ಕೆಲವರು ಗೌಪ್ಯ ಸಭೆ ಮಾಡುವ ಮೂಲಕ ಚರ್ಚೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಾತಿ ಗಣತಿಯ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಲು ಸಿಎಂ ಸಭೆ ಕರೆಯಲಿದ್ದಾರೆ. ಈ ವೇದಿಕೆಯಲ್ಲಿ ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳಲು ಎಲ್ಲರಿಗೂ ಸ್ವಾತಂತ್ರವಿದೆ. ಜಾತಿ ಜನಗಣತಿಯಿಂದ ಯಾವುದೇ ರಾಜಕೀಯ ಲಾಭವಿಲ್ಲದಿದ್ದರೂ ಜಾತಿಯ ಅಭಿಮಾನ ಅಡ್ಡಿ ಬಂದಿದೆ ಎಂದರು.