ಹುಬ್ಬಳ್ಳಿ: ಜಾತಿ ಗಣತಿ ಮಾಡುವ ಆಸಕ್ತಿ ಕೇಂದ್ರ ಸರ್ಕಾರಕ್ಕೆ ಇಲ್ಲ. ಜಾತಿ ಗಣತಿ ಘೋಷಣೆ ಮಾಡಿದ್ದರೂ ಅದನ್ನು ಮನಃ ಪೂರ್ವಕವಾಗಿ ಮಾಡುವುದು ಅನುಮಾನವಿದೆ. ನಿಜವಾಗಲೂ ಆಸಕ್ತಿ ಇದ್ದರೆ ಮೂರು ತಿಂಗಳಲ್ಲಿ ಜಾತಿ ಗಣತಿ ಮಾಡಿ ತೋರಿಸಲಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸವಾಲು ಹಾಕಿದರು.
ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರೋಧಿಸಿ ಇಲ್ಲಿನ ಗಿರಣಿ ಚಾಳ ಮೈದಾನದಲ್ಲಿ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಎರಡು ವರ್ಷಗಳ ಹಿಂದೆಯೇ ನಾನು ಪ್ರಧಾನಿಯವರಿಗೆ ಪತ್ರ ಬರೆದು ಜಾತಿ ಗಣತಿ ನಡೆಸಬೇಕು. ಇದರಿಂದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ಗೊತ್ತಾಗುತ್ತದೆ. ಕೂಲಂಕುಷ ಅಧ್ಯಯನ ನಡೆಸಬೇಕು ಎಂದು ಕೋರಿದ್ದೆ. ಆದರೆ, ಪ್ರಧಾನಿಯವರು ಗಮನಹರಿಸಿರಲಿಲ್ಲ. ಆದರೆ, ನಮ್ಮ ಪಕ್ಷವು ದೇಶವ್ಯಾಪಿ ಜಾತಿ ಗಣತಿ ಹೋರಾಟ ನಡೆಸಿಕೊಂಡು ಬಂದಿತು. ಜೊತೆಗೆ ಜನರ ಒತ್ತಡವೂ ಹೆಚ್ಚಾಗಿದ್ದರಿಂದ ಈಗ ಜಾತಿ ಗಣತಿ ಮಾಡುವುದಾಗಿ ಘೋಷಿಸಿದ್ದಾರೆ. ನಿಜವಾಗಲೂ ಕಾಳಜಿ ಇದ್ದಿದ್ದರೆ ಎರಡು ವರ್ಷದ ಹಿಂದೆಯೇ ಮಾಡಬೇಕಿತ್ತು? ಯಾಕೆ ಮಾಡಲಿಲ್ಲ? ಯಾಕೆಂದರೆ ಅವರಿಗೆ ನಿಜವಾದ ಕಾಳಜಿಯೇ ಇರಲಿಲ್ಲ ಎಂದು ಖರ್ಗೆ ಆರೋಪಿಸಿದರು.