ದಾವಣಗೆರೆ: ಗೊಂದಲಕ್ಕೀಡಾಗಿರುವ ಜಾತಿ ಗಣತಿ ವರದಿ ಅನುಷ್ಠಾನಗೊಳಿಸಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರ, ಅದನ್ನು ಕೈಬಿಟ್ಟು ಮರು ಸಮೀಕ್ಷೆ ನಡೆಸಬೇಕೆಂದು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಆಗ್ರಹಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ ಗಣತಿ ಮಾಡಲು ಕೇಂದ್ರ ಸರ್ಕಾರಕ್ಕೆ ಮಾತ್ರ ಅಧಿಕಾರವಿದೆ. ಆದರೆ ೨೦೧೫ರಲ್ಲಿ ಕಾಂಗ್ರೆಸ್ ಸರ್ಕಾರ ಜಾತಿ ಗಣತಿಗೆ ಮುಂದಾಗಿತ್ತು. ಆಗ ಕೆಲವರು ಸುಪ್ರೀಂಗೆ ಮೊರೆ ಹೋದಾಗ ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ ಎಂದು ತೀರ್ಪು ನೀಡಿತು. ಆಗ ರಾಜ್ಯ ಸರ್ಕಾರ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆ ನಡೆಸಿ ಈಗ ಜಾತಿ ಗಣತಿ ಎಂದು ಬಿಂಬಿಸುತ್ತಿದೆ ಎಂದರು.
ಪಂಚಮಸಾಲಿ ಸಮಾಜ ಬಾಂಧವರು ೮೦ ಲಕ್ಷ ಜನಸಂಖ್ಯೆ ಹೊಂದಿದೆ ಎಂದು ಸಭೆ, ಸಮಾರಂಭ, ಕಾರ್ಯಕ್ರಮಗಳಲ್ಲಿ ಹೇಳಿಕೊಂಡು ಬಂದಿವೆ. ಈಗ ಸರ್ಕಾರ ಜಾತಿಗಳ ಸಂಖ್ಯೆ ಹೊರ ಹಾಕಿ, ೧೬ ಲಕ್ಷ ಸಂಖ್ಯೆ ತೋರಿಸುತ್ತಿದೆ. ಸಮಾಜಗಳ ನಡುವೆ ಜಾತಿ ಸಂಘರ್ಷ ಉಂಟು ಮಾಡಿ ಜನರ ಭಾವನೆ ಘಾಸಿಗೊಳಿಸುತ್ತಿದೆ ಎಂದು ಸರ್ಕಾರದ ನಡೆಗೆ ಕಿಡಿಕಾರಿದರು.
ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಬೆಂಬಲ:
ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಜಾತಿ ಗಣತಿ ವರದಿ ಅನುಷ್ಠಾನಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿರುವುದಕ್ಕೆ ನಮ್ಮ ಬೆಂಬಲವಿದೆ ಎಂದ ಎಚ್.ಎಸ್.ಶಿವಶಂಕರ್, ಈ ಸಮೀಕ್ಷೆ ಗೊಂದಲದ ಗೂಡಾಗಿದ್ದು, ಇದನ್ನು ರದ್ದುಪಡಿಸಿ ಮರು ಸಮೀಕ್ಷೆ ನಡೆಸಬೇಕೆಂದು ಒತ್ತಾಯಿಸಿದರು.
ಲಿಂಗಾಯತ ಸಮಾಜದ ಎಲ್ಲಾ ಶಾಸಕರು ಒಗ್ಗಟ್ಟಾಗಿ ಈ ಜಾತಿ ಗಣತಿ ವರದಿ ವಿರುದ್ಧ ಧ್ವನಿ ಎತ್ತುವ ಮೂಲಕ ಮಹಾಸಭಾ ತೆಗೆದುಕೊಂಡ ತೀರ್ಮಾನಕ್ಕೆ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು. ೧೦ ವರ್ಷದ ಹಿಂದೆ ತಯಾರಿಸಿದ ವರದಿಗೆ ಯಾರೂ ಬೆಂಬಲಿಸದೆ, ಮರು ಸಮೀಕ್ಷೆಗೆ ಒತ್ತಡ ಹಾಕಬೇಕೆಂದು ಮನವಿ ಮಾಡಿದರು.
                























