ಜಮೀನು ಕೈತಪ್ಪುವ ಆತಂಕದಲ್ಲಿ ರೈತ ಆತ್ಮಹತ್ಯೆ

0
36
ಆತ್ಮಹತ್ಯೆ

ದಾವಣಗೆರೆ: ಸಾಲ ಮಾಡಿ ಖರೀದಿಸಿದ್ದ ಜಮೀನು ಯಾರದ್ದೋ ಪಾಲಾದೀತೆಂಬ ಆತಂಕದಲ್ಲಿ ರೈತರೊಬ್ಬರು ತಮ್ಮ ಅಡಿಕೆ ತೋಟದಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚನ್ನಗಿರಿ ತಾಲೂಕಿನ ವೀರಾಪುರ ಗ್ರಾಮದಲ್ಲಿ ಬುಧವಾರ ನಡೆದಿದೆ.
ಗ್ರಾಮದ ರೈತ ತಿಮ್ಮಪ್ಪ ಆತ್ಮಹತ್ಯೆ ಮಾಡಿಕೊಂಡ ರೈತ. ಸಾಲ ಮಾಡಿ ಸುಮಾರು ೪.೨೬ ಎಕರೆ ಜಮೀನನ್ನು ಖರೀದಿಸಿದ್ದ ರೈತ, ತಾನು ಖರೀದಿಸಿ, ಜತನದಿಂದ ಅಡಿಕೆ ಗಿಡ ಬೆಳೆಸಿದ್ದ. ತೋಟ ಬೇರೆಯವರ ಪಾಲಾದೀತೆಂದು ಆತಂಕದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗುತ್ತಿದೆ.
ವೀರಾಪುರ ಗ್ರಾಮದ ದರಖಾಸ್ತು ಜಮೀನನ್ನು ರೈತ ತಿಮ್ಮಪ್ಪ ಖರೀದಿಸಿದ್ದರು. ಮೂಲ ಮಾಲೀಕ ಬೇರೆಯವರಿಗೆ ಜಮೀನು ಮಾರಾಟ ಮಾಡಿದ್ದನು. ಬಳಿಕ ಅದೇ ಜಮೀನನ್ನು ಮೂರನೇ ವಾರಸುದಾರನಾಗಿ ಮೂಡಲಪ್ಪ ಎಂಬ ವ್ಯಕ್ತಿ ಖರೀದಿಸಿದ್ದರು. ಇದೇ ಮೂಡಲಪ್ಪನಿಂದ ಮೃತ ರೈತ ತಿಮ್ಮಪ್ಪ ಜಮೀನು ಖರೀದಿಸಿ, ಉಳುಮೆ ಮಾಡಿ, ಅಡಿಕೆ ತೋಟ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.
ತಿಮ್ಮಪ್ಪನ ಜಮೀನಿನ ಪಕ್ಕದ ವ್ಯಕ್ತಿಯು ಇದೇ ಜಮೀನು ಖರೀದಿಸಿದ್ದ ಮೂರನೇ ವಾರಸುದಾರ ಮೂಡಲಪ್ಪನ ವಿರುದ್ಧ ಕೇಸ್ ದಾಖಲಿಸಿದ್ದರು. ತಾನು ಸಾಲಸೋಲ ಮಾಡಿ ಖರೀದಿಸಿದ್ದ, ಅಡಿಕೆ ಗಿಡಗಳನ್ನು ಬೆಳೆದಿದ್ದ ತೋಟವು ಎಲ್ಲಿ ತನ್ನ ಕೈತಪ್ಪುತ್ತದೋ ಎಂಬ ಆತಂಕದಲ್ಲಿ ತಿಮ್ಮಪ್ಪ ತಾನೇ ಬೆಳೆಸಿದ್ದ ಅದೇ ಅಡಿಕೆ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ.

Previous articleಅಪ್ರಾಪ್ತೆಯ ಮದುವೆ, ಅತ್ಯಾಚಾರ ಪ್ರಕರಣ: ಆರೋಪಿಗೆ 21 ವರ್ಷ ಶಿಕ್ಷೆ
Next articleಕಿಟಕಿ ಸೀಟಿಗಾಗಿ ಬಸ್ಸಿನಲ್ಲಿ ಯುವಕನಿಗೆ ಚಾಕು ಇರಿತ