ಜನಿವಾರ ತೆಗೆಸಿ ಪರೀಕ್ಷೆಗೆ ಅವಕಾಶ: ಖಂಡನೆ

0
10

ಶಿವಮೊಗ್ಗ: ಸಿಇಟಿ ಪರೀಕ್ಷೆ ವೇಳೆ ಬ್ರಾಹ್ಮಣ ವಿದ್ಯಾರ್ಥಿಗಳ ಗಾಯತ್ರಿ ದೀಕ್ಷೆ ಪಡೆದ ಜನಿವಾರ ತೆಗೆಸಿ ಪರೀಕ್ಷೆ ಬರೆಯಲು ಒಳಗೆ ಕಳುಹಿಸಿದ್ದನ್ನು ಖಂಡಿಸಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತ್ತು ಜಿಲ್ಲೆಯ ವಿವಿಧ ಬ್ರಾಹ್ಮಣ ಸಂಘಗಳ ಒಕ್ಕೂಟ ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ನಗರದ ಆದಿಚುಂಚನಗಿರಿ ಕಾಲೇಜಿನ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಕಾಲೇಜಿನ ಒಳಭಾಗಕ್ಕೆ ತೆರಳುವ ಸಮಯದಲ್ಲಿ ಅಲ್ಲಿನ ಸಿಬ್ಬಂದಿ ಬ್ರಾಹ್ಮಣ ವಿದ್ಯಾರ್ಥಿಗಳು ಕೈಯಲ್ಲಿ ಕಟ್ಟಿಕೊಂಡಿದ್ದ ಕಾಶಿದಾರ ಮತ್ತು ಗಾಯತ್ರಿ ದೀಕ್ಷೆ ಪಡೆದ ಜನಿವಾರ ತೆಗೆಸಲಾಗಿತ್ತು.
ಈ ಸಂಗತಿ ಮಕ್ಕಳು ಪೋಷಕರಿಗೆ ತಿಳಿಸಿದ್ದರು. ಪೋಷಕರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತ್ತು ವಿಪ್ರ ಸಂಘಟನೆಗಳಿಗೆ ಮಾಹಿತಿ ನೀಡಿದ್ದರು. ಈ ಹಿನ್ನಲೆಯಲ್ಲಿ ಈ ಸಂಘಟನೆಗಳು ಕೇಂದ್ರದಲ್ಲಿ ನಡೆದ ಪ್ರಸಂಗಕ್ಕೆ ಖಂಡನೆ ವ್ಯಕ್ತಪಡಿಸಿದ್ದಾರೆ.
ಪರೀಕ್ಷಾ ಕೇಂದ್ರದಲ್ಲಿ ಈ ರೀತಿ ಗಾಯತ್ರಿ ದೀಕ್ಷೆ ಪಡೆದು ಆತ್ಮಸಾಕ್ಷತ್ಕಾರದ ಪರಮ ಸಂಕಲ್ಪ ಮಾಡಿದ್ದ ವಿದ್ಯಾರ್ಥಿಗಳ ಜನಿವಾರ ಬಿಚ್ಚಿಸಿದ ಅವಮಾನಕಾರಿ ಘಟನೆ ಅಧಿಕಾರಿಗಳು ಮಾಡಿದ್ದಾರೆ. ವರ್ಷಪೂರ್ತಿ ಕಷ್ಟಪಟ್ಟು ಅಧ್ಯಯನ ಮಾಡಿ ಒಳ್ಳೆಯ ಭವಿಷ್ಯಕ್ಕಾಗಿ ಸಿದ್ಧತೆ ಮಾಡಿಕೊಂಡು ಬಂದಿದ್ದ ವಿದ್ಯಾರ್ಥಿಗಳ ಜನಿವಾರ ಬಿಚ್ಚಿಸುವ ಅಧಿಕಾರಿಗಳ ಕೃತ್ಯ ಬ್ರಾಹ್ಮಣ ಮತ್ತು ಹಿಂದೂ ವಿರೋಧಿಯಾಗಿದೆ ಎಂದು ಸಂಘಟನೆಗಳ ಮುಖಂಡರು ದೂರಿದರು.
ಕೂಡಲೇ ಜಿಲ್ಲಾಧಿಕಾರಿಗಳು ತನಿಖೆ ನಡೆಸಿ ಹಿಂದೂ ಪರಂಪರೆಯ ಸಂಸ್ಕಾರವಾದ ಗಾಯತ್ರಿ ಮಂತ್ರ ದೀಕ್ಷೆಯ ಪ್ರಾಮುಖ್ಯತೆ, ಘನತೆ ಗೌರವ ಗೊತ್ತಿಲ್ಲದ ಧರ್ಮ ವಿರೋಧಿ ಕೃತ್ಯ ಎಸಗಿರುವ ಹೀನ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಬೇಕು ಎಂದು ಮನವಿ ಮೂಲಕ ವಿನಂತಿಸಲಾಯಿತು.

Previous articleಕಾಶಪ್ಪನವರ ಆರೋಪಕ್ಕೆ 20ರಂದೇ ಉತ್ತರ
Next articleಅಪ್ರಾಪ್ತೆ ಅಪಹರಿಸಿ ಅತ್ಯಾಚಾರ: ಇಬ್ಬರಿಗೆ ಕಾರಾಗೃಹ ಶಿಕ್ಷೆ