ಕಲಬುರಗಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ರಾಜ್ಯಾದ್ಯಂತ ನಡೆಸಲಾದ ಸಿಇಟಿ ಪರೀಕ್ಷೆಗೆ ಆಗಮಿಸಿದ ಬೀದರ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಬ್ರಾಹ್ಮಣ ಸಮುದಾಯದ ಪರೀಕ್ಷಾರ್ಥಿಗಳು ಧರಿಸಿರುವ ಜನಿವಾರ ತೆಗೆದು ಕಸದ ಬುಟ್ಟಿಗೆ ಎಸೆದಿರುವ ತಪಾಸಣಾ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಜಿಲ್ಲಾ ಬ್ರಾಹ್ಮಣ ಸಂಘ, ಬ್ರಾಹ್ಮಿನ್ ಆರ್ಗ್ನೈಜೇಷನ್ ಆಫ್ ಇಂಡಿಯಾದ ನೇತೃತ್ವದಲ್ಲಿ ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಟಯರ್ ಸುಟ್ಟು, ಮಾನವ ಸರಪಳಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಬೀದರ ಜಿಲ್ಲೆಯ ಸಾಯಿಸ್ಫೂರ್ತಿ ಕಾಲೇಜಿನಲ್ಲಿ ವಿದ್ಯಾರ್ಥಿಯೊಬ್ಬ ಜನಿವಾರ ಧರಿಸಿದ ಕಾರಣದಿಂದ ಪರೀಕ್ಷೆಗೆ ಅವಕಾಶ ನೀಡದೆ ವಾಪಸ್ ಕಳುಹಿಸಿ ಜಾತಿ ನಿಂದನೆ ಮಾಡಿರುವುದು ಬೆಳಕಿಗೆ ಬಂದಿದೆ. ಸನಾತನ ಹಿಂದೂ ಧರ್ಮದ ಜನಿವಾರ ತನ್ನದೆಯಾದ ಪಾವಿತ್ರö್ಯತೆಯಿದೆ. ಜನಿವಾರವನ್ನು ಧರಿಸಬೇಕಾದರೆ ಬಾಲಕರಿಗೆ ಉಪನಯನದಲ್ಲಿ ಗಾಯತ್ರಿ ಮಂತ್ರ ಬೋಧನೆಯೊಂದಿಗೆ ಗುರುಗಳ ಸಮ್ಮುಖದಲ್ಲಿ ಜನಿವಾರ ಧಾರಣೆ ಮಾಡುವ ಸಂಪ್ರದಾಯವಿದೆ. ಆದರೆ ತಪಾಸಣಾ ಅಧಿಕಾರಿಗಳು ಪರೀಕ್ಷಾರ್ಥಿಗಳು ಭೌತಿಕ ತಪಾಸಣೆಯ ವೇಳೆಗೆ ಜನಿವಾರ ತೆಗೆಸಬೇಕು ಎಂಬ ಕಾನೂನು ಇದೆಯಾ? ಯಾವ ಆಧಾರದ ಮೇಲೆ ವಿದ್ಯಾರ್ಥಿಗಳ ಮೈಮೇಲಿನ ಜನಿವಾರ ತೆಗೆದು ಕಸದಬುಟ್ಟಿಗೆ ಹಾಕಿದ್ದಾರೆ. ಇನ್ನು ಜನಿವಾರ ತೆಗೆಯಲು ನಿರಾಕರಿಸಿದ ವಿದ್ಯಾರ್ಥಿಗೆ ಪರೀಕ್ಷೆಗೆ ಹಾಜರಾಗುವಂತೆ ಮನೆಗೆ ವಾಪಸ್ ಕಳುಹಿಸಿದ್ದು ಯಾವ ನ್ಯಾಯ? ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು. ಅಲ್ಲದೆ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದು, ಇದನ್ನು ಸರಿಪಡಿಸಬೇಕು. ಯಾವ ಕಾರಣಕ್ಕೂ ಆ ವಿದ್ಯಾರ್ಥಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಘೋಷಣೆ ಕೂಗಿದರು. ನಂತರ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲ ಮತ್ತು ಮುಖ್ಯಮಂತ್ರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಬ್ರಾಹ್ಮಿನ್ ಆರ್ಗ್ನೈಜೇಷನ್ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ರವೀಂದ್ರ ಕುಲಕರ್ಣಿ, ಜಿಲ್ಲಾಧ್ಯಕ್ಷ ವೆಂಕಟೇಶ ಕುಲಕರ್ಣಿ, ಮಹಿಳಾ ಜಿಲ್ಲಾಧ್ಯಕ್ಷೆ ಸುಮಂಗಲಾ ಚಕ್ರವರ್ತಿ, ಯುವ ಘಟಕದ ಜಿಲ್ಲಾಧ್ಯಕ್ಷ ಗುರುರಾಜ್ ಜೋಶಿ, ಗ್ರಾಮೀಣ ಜಿಲ್ಲಾಧ್ಯಕ್ಷ ವೆಂಕಟೇಶ ಚಿತ್ತಾಪುರ, ಗುಂಡಾಚಾರ್ಯ ನರಿಬೋಳ, ಸಕುಡಾ ಮಾಜಿ ಅಧ್ಯಕ್ಷರಾದ ವಿದ್ಯಾಸಾಗರ ಕುಲಕರ್ಣಿ, ದಯಾಘನ ಧಾರವಾಡಕರ್, ಬಿಜೆಪಿ ಮುಖಂಡರಾದ ಪ್ರಹ್ಲಾದ್ ಪೂಜಾರಿ, ಪ್ರಹ್ಲಾದ್ ಭುರ್ಲಿ, ಘಂಟಿ ರಾಮಚಾರ್ಯ, ಅನಿಲಕುಮಾರ ಕುಲಕರ್ಣಿ, ಗುರುರಾಜ ಜೋಶಿ, ಗುರುರಾಜ ದೇಶಪಾಂಡೆ, ವೇಣುಗೋಪಾಲ ಕುಲಕರ್ಣಿ, ಗೋಪಾಲಕೃಷ್ಣ ಕುಲಕರ್ಣಿ ಸರಡಗಿ, ಗೋವಿಂದ ಕುಲಕರ್ಣಿ, ವಿಶ್ವಾಸ ಮೋಘೇಕರ್, ಆನಂದತೀರ್ಥ ಜೋಶಿ, ಪ್ರಸನ್ನ ದೇಶಪಾಂಡೆ, ಖ್ಯಾತ ಮಕ್ಕಳ ತಜ್ಞ ಡಾ. ಪ್ರಶಾಂತ ಕುಲಕರ್ಣಿ, ವಿಶ್ವ ಮಧ್ವ ಮಹಾಪರಿಷತ್ ಅಧ್ಯಕ್ಷ ಡಿ.ಕೆ ಕುಲಕರ್ಣಿ, ಪ್ರಧಾನ ಕಾಯದರ್ಶಿ ಸುಧಾಕರ್ ಉಡಬಾಳಕರ್, ಪ್ರಮುಖರಾದ ಮುರಳೀಧರ ಕರಲಗೀಕರ್, ರಾಘವೇಂದ್ರ ಪತಕಿ, ಪ್ರಶಾಂತ ಕೋರಳ್ಳಿ, ಆರ್.ಆರ್. ಕುಲಕರ್ಣಿ, ರಾಜೇಶ್ವರಿ ದೇಶಮುಖ, ಡಾ. ರಮೇಶ ಯಳಸಂಗಿಕರ್, ರಂಗನಾಥ ದೇಸಾಯಿ, ಶ್ರೀನಿವಾಸ ಕುಲಕರ್ಣಿ, ವಿನಾಯಕ ಕುಲಕರ್ಣಿ, ಕೈಲಸಾನಾಥ ದೀಕ್ಷಿತ್, ಪಿ.ವಿ. ಜೋಶಿ, ನಾರಾಯಣ ಜೋಶಿ, ಆವಿನಾಶ ಕುಲಕರ್ಣಿ, ಪ್ರಸನ್ನ ದೇಶಪಾಂಡೆ, ಯೋಗೇಶ ಭಟ್, ಪವನ ಫಿರೋಜಾಬಾದ್ ಮತ್ತಿತರರಿದ್ದರು.
ಆ ವಿದ್ಯಾರ್ಥಿ ಮಾನಸಿಕವಾಗಿ ನೊಂದಿದ್ದು, ಮತ್ತೊಮ್ಮೆ ಪರೀಕ್ಷೆ ನಡೆಸಲು ಸಾಧ್ಯವಾಗದಿದ್ದರೆ ಗ್ರೇಸ್ ಅಂಕ ನೀಡಿ ಉತ್ತೀರ್ಣಗೊಳಿಸಿ ಸೀಟು ಕೊಡಬೇಕು. ಆ ವಿದ್ಯಾರ್ಥಿಗೆ ಸರ್ಕಾರ ನ್ಯಾಯ ಒದಗಿಸಿಕೊಡಬೇಕು.
ಪ್ರಹ್ಲಾದ್ ಭುರ್ಲಿ, ಶೈಕ್ಷಣಿಕ ತಜ್ಞ
ಬೀದರ ಜಿಲ್ಲೆಯ ತಪಿತಸ್ಥ ಅಧಿಕಾರಿ ಯನ್ನು ಅಮಾನತು ಮಾಡುವುದಲ್ಲ, ಇಡೀ ಸೇವೆಯಿಂದ ವಜಾಗೊಳಿಸಬೇಕು. ಮಾನಸಿಕವಾಗಿ ನೊಂದಿರುವ ವಿದ್ಯಾರ್ಥಿಗೆ ನ್ಯಾಯ ಒದಗಿಸಬೇಕು.
ಮಲ್ಲಿಕಾರ್ಜುನ ಗಾರಂಪಳ್ಳಿ, ವಿಪ್ರ ಸಮಾಜದ ಮುಖಂಡ
ಬೀದರ ಜಿಲ್ಲೆಯಲ್ಲಿ ಪರೀಕ್ಷೆಯಿಂದ ವಂಚಿತರಾದ ಆ ವಿದ್ಯಾರ್ಥಿಗೆ ಅನ್ಯಾಯವಾಗಿದ್ದು, ಕೂಡಲೇ ಸರಿಪಡಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಮತ್ತಷ್ಟು ಉಗ್ರ ಪ್ರತಿಭಟನೆ ಬಿಸಿ ಎದುರಿಸಬೇಕಾಗುತ್ತದೆ. ಕೆಇಎ ನಿರ್ದೇಶಕ ಪ್ರಸನ್ನ ಸ್ಪಷ್ಟನೆ ನೀಡಿದರೂ ನಮ್ಮ ನ್ಯಾಯಯತ ಬೇಡಿಕೆಗಳಿಗೆ ಸ್ಪಂದಿಸಬೇಕು.
ವಾದಿರಾಜ್ ವ್ಯಾಸಮುದ್ರ, ಹಿರಿಯ ಪತ್ರಕರ್ತ