ಜನಿವಾರ ತೆಗೆಸಿದವರು ಸರ್ಕಾರಿ ನೌಕರರಿದ್ದರೆ ಪರಿಶೀಲಿಸಿ ಕ್ರಮ

0
17

ಹುಬ್ಬಳ್ಳಿ: ಧಾರವಾಡದಲ್ಲಿ ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಯ ಜನಿವಾರ ತೆಗೆಸಿದ ಪ್ರಕರಣದಲ್ಲಿ ಸರ್ಕಾರಿ ನೌಕರರು ಇದ್ದರೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ. ಒಂದು ವೇಳೆ ಖಾಸಗಿ ಸಂಸ್ಥೆ ನೌಕರರು ಇದ್ದರೆ ಏನು ಮಾಡಲು ಆಗುವುದಿಲ್ಲ. ಒಂದು ವೇಳೆ ಖಾಸಗಿ ಸಂಸ್ಥೆಯವರು ಇದ್ದರೆ ಅವರ ಮನಸ್ಥಿತಿ ಸರಿ ಇಲ್ಲ ಎಂದರ್ಥ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಪರೀಕ್ಷಾರ್ಥಿಗಳ ಜನಿವಾರವನ್ನು ಖಾಸಗಿ ಸಂಸ್ಥೆಯವರು ತೆಗೆಸಿದ್ದರೆ ಅವರ ವಿರುದ್ಧ ಲಿಖಿತ ರೂಪದಲ್ಲಿ ದೂರು ನೀಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.
ರಾಹುಲ್ ಗಾಂಧಿ ಮಾತು ಕೇಳಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯವಾಗಿ ನೆಗೆದು ಬಿದ್ದು ಹೋಗುತ್ತಾರೆ ಎಂಬ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಒಬ್ಬ ಕೇಂದ್ರ ಸಚಿವರಾಗಿ ಜೋಶಿ ಅವರು ಎರಡು ಬಾರಿ ಜನರ ಆಶೀರ್ವಾದದಿಂದ ಮುಖ್ಯಮಂತ್ರಿ ಆದವರ ಬಗ್ಗೆ ಮಾತನಾಡುವುದು ಸರಿಯಲ್ಲ. ಆ ರೀತಿ ಮಾತನಾಡಿರುವುದು ಅವರ ಬಾಯಿಗೆ ಮಾತ್ರ ಸರಿ ಎಣಿಸುತ್ತದೆ. ರಾಹುಲ್ ಗಾಂಧಿ ಅವರು ಭಸ್ಮಾಸುರರಾದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಏನಂತೆ ಎಂದು ಪ್ರಶ್ನಿಸಿದರು.
ಕಳೆದ ಹನ್ನೊಂದು ವರ್ಷಗಳಲ್ಲಿ ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿ ಏನು ಮಾಡಿದ್ದಾರೆ? ಬಿಜೆಪಿ ನಾಯಕರು ಈ ಬಗ್ಗೆ ಏನನ್ನು ಮಾತನಾಡದೇ ಕೇವಲ ಅವರಿಗೆ ಅನುಕೂಲವಾಗುವ ವಿಷಯಗಳ ಬಗ್ಗೆ ಮಾತ್ರ ಮಾತನಾಡುತ್ತಾರೆ. ಬಿಜೆಪಿ ಆಡಳಿತದಲ್ಲಿ ಇರುವ ರಾಜ್ಯಗಳಲ್ಲಿ ದಲಿತರ ಮೇಲೆ ಅಟ್ರಾಸಿಟಿ ಪ್ರಕರಣಗಳು ಹೆಚ್ಚಾಗುತ್ತಿವೆ. ಅಲ್ಲದೇ, ಜ್ಯೋತಿ ಬಾ ಫುಲೆ ಅವರ ಚಲನಚಿತ್ರ ಬಿಡುಗಡೆಗೆ ಬಿಜೆಪಿಯವರು ಏಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಲಾಡ್ ಪ್ರಶ್ನಿಸಿದರು.

Previous articleಬಿಜೆಪಿ ಜನಾಕ್ರೋಶ ಯಾತ್ರೆಗೆ ಬೆಣ್ಣೆನಗರಿಯಲ್ಲಿ ಭರ್ಜರಿ ಸಿದ್ಧತೆ
Next articleಕೇಂದ್ರ ಸರ್ಕಾರ ಒಪ್ಪಿಗೆ ಕೊಟ್ಟರೆ ನಾಳೆಯೇ ಮಹದಾಯಿ ಯೋಜನೆ ಜಾರಿ