ಮಗಳ ಅತ್ಯಾಚಾರಿಗೆ ಸಾವಿನ ದಾರಿ ತೋರಿದ್ದ ತಂದೆ ಇನ್ನಿಲ್ಲ
ಮಲಪ್ಪುರಂ: ಮಗಳ ಮೇಲೆ ಕ್ರೂರವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡಿದ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದಿದ್ದ ತಂದೆ ಕೇರಳದ ಶಂಕರನಾರಾಯಣನ್(75) ವಯಸ್ಸಹಜ ಅನಾರೋಗ್ಯದಿಂದ ಸೋಮವಾರ ರಾತ್ರಿ ನಿಧನರಾಗಿದ್ದಾರೆ.
ಶಂಕರನಾರಾಯಣನ್ ಅವರ ಕಿರಿಯ ಮಗಳು ಕೃಷ್ಣಪ್ರಿಯಾ ಅವರನ್ನು 2001ರ ಫೆಬ್ರವರಿಯಲ್ಲಿ ಅವರ ನೆರಮನೆಯ ಕುನ್ನುಮ್ಮಲ್ ಮುಹಮ್ಮದ್ ಕೋಯ ಕ್ರೂರವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ. ಬಳಿಕ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ನ್ಯಾಯಾಲಯ ಆರೋಪಿಗೆ ಶಿಕ್ಷೆ ವಿಧಿಸಿತ್ತು. ಆರೋಪಿ 2002ರ ಜುಲೈ 27ರಂದು ಜಾಮೀನಿನ ಮೇಲೆ ಹೊರಬಂದಿದ್ದ. ಆಗ ಕೃಷ್ಣಪ್ರಿಯಾಳ ತಂದೆ ಮುಹಮ್ಮದ್ ಕೋಯಾನನ್ನು ಗುಂಡಿಕ್ಕಿ ಕೊಂದಿದ್ದರು. ಮಂಜೇರಿ ನ್ಯಾಯಾಲಯ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಹೈಕೋರ್ಟ್ ಅವರನ್ನು ಖುಲಾಸೆಗೊಳಿಸಿತ್ತು.
ಮಗಳ ಸಾವಿನ ನಂತರ ಕಣ್ಣೀರಿನ ಕಹಿಯೊಂದಿಗೆ ರಾತ್ರಿಗಳನ್ನು ಕಳೆಯುತ್ತಿದ್ದ ಶಂಕರನಾರಾಯಣನ್ ಜನಸಾಮಾಮಾನ್ಯರ ದೃಷ್ಟಿಯಲ್ಲಿ ಹೀರೋ ಆಗಿದ್ದರು. ಇಂದಿಗೂ ಸಹ ಕೇರಳದಲ್ಲಿ, ಕ್ರೂರ ಅತ್ಯಾಚಾರಗಳು ಮತ್ತು ಕೊಲೆಗಳು ಸಂಭವಿಸಿದಾಗ, ಶಂಕರನಾರಾಯಣನ್ ಮಗಳಿಗೆ ನ್ಯಾಯ ಒದಗಿಸಿದ ರೀತಿಯಲ್ಲಿಯೇ ನ್ಯಾಯ ಕೊಡಿಸಬೇಕು ಎಂಬ ಅಭಿಪ್ರಾಯವಿದೆ.