ಚೈತನ್ಯಶೀಲ, ಅಭಿವೃದ್ಧಿಪರ ಬಜೆಟ್

ಗದಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಮುಂಗಡ ಪತ್ರವು ಚೈತನ್ಯಶೀಲ ಅಭಿವೃದ್ಧಿಪರ, ಅರ್ಥವ್ಯವಸ್ಥೆ ಏರುಗತಿಯಲ್ಲಿ ಕೊಂಡೊಯ್ಯುವ ಬಜೆಟ್. ಅಭಿವೃದ್ಧಿ, ಸಾಮಾಜಿಕ ನ್ಯಾಯ, ಸಮಾನ ಹಂಚಿಕೆ ಮತ್ತು ಪ್ರದೇಶವಾರು ಸಮತೋಲನ ಕಾಯ್ದುಕೊಳ್ಳುವ ಅಭಿವೃದ್ಧಿಶೀಲ ಮುಂಗಡ ಪತ್ರ ಮಂಡಿಸಿದ್ದಾರೆ ಎಂದು ಕಾನೂನು ಸಚಿವ ಡಾ.ಎಚ್.ಕೆ.ಪಾಟೀಲ ಹೇಳಿದ್ದಾರೆ.
ಶಿಕ್ಷಣ, ಆರೋಗ್ಯ, ನೀರಾವರಿ, ಸಮಾಜ ಕಲ್ಯಾಣ ಮೂಲಸೌಕರ್ಯ ಅಭಿವೃದ್ಧಿಗೆ ಹಾಗೂ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗಿದೆ. ಪ್ರವಾಸೋದ್ಯಮ ಮೂಲಸೌಕರ್ಯವನ್ನು ಆದ್ಯತಾ ವಲಯವನ್ನಾಗಿ ಪರಿಗಣಿಸಲಾಗಿದೆ. ಗದಗ ಜಿಲ್ಲೆಯ ಡಂಬಳದಲ್ಲಿ ತೋಟಗಾರಿಕಾ ಕಾಲೇಜನ್ನು ಸ್ಥಾಪಿಸಲು ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಕರ್ನಾಟಕ ಅರ್ಥ ವ್ಯವಸ್ಥೆ ಅಭಿವೃದ್ಧಿಯತ್ತ ದಾಪುಗಾಲನ್ನಿಡುತ್ತಿದೆ. ವಿತ್ತಿಯ ಶಿಸ್ತನ್ನು ಕಾಯ್ದುಕೊಂಡು ಕೊರತೆ ಮತ್ತು ವೆಚ್ಚಗಳನ್ನು ಸರಿದೂಗಿಸುವ ಕಾರ್ಯಕ್ರಮಗಳನ್ನು ನೀಡಲಾಗಿದೆ. ಎಲ್ಲಾ ವಲಯಗಳಲ್ಲಿ ರಸ್ತೆ ಸಂಪರ್ಕ ಮತ್ತು ಇತರ ಸಂಪರ್ಕ ವ್ಯವಸ್ಥೆಗಳನ್ನು ಆಧುನಿಕರಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.