ಚುನಾವಣಾ ಬಾಂಡ್ ಬ್ರೂಕ್‌ಬಾಂಡ್

0
11

ಎಲ್ಲಕಡೆ ಚುನಾವಣಾ ಬಾಂಡ್ ಎಂಬ ಶಬ್ದ ಕೇಳಿದ್ದ ಯಂಕೋಬಿ ಕಿ ರಾಣಿ ಸ್ಟೋರ್ಸ್ ಮಾಲಿಕ ಸಣ್ಣೆಂಕೋಬಿ ಬಲು ಖುಷಿಯಾಗಿದ್ದ. ಹಿಂದಕ್ಕೆ ಬ್ರೂಕ್‌ಬಾಂಡ್ ಚಹಪುಡಿ ಏಜೆನ್ಸಿಯಿಂದ ನಾನು ಎಷ್ಟು ಲಾಭ ಗಳಿಸಿದ್ದೆ. ಹೋಲ್‌ಸೇಲ್‌ನಲ್ಲಿ ಕೇಜಿಗಟ್ಟಲೇ ತಂದು ಇಲ್ಲಿ ಖುಲ್ಲಾ ಮಾರಿ ಏಕದಂ ಡಬಲ್ ಲಾಭ ಮಾಡಿಕೊಂಡಿದ್ದೆ. ಆ ಚಹಪುಡಿ ಯಾಕೋ ನಿಂತು ಹೋಯಿತು. ಅಡ್ಡಿಯಿಲ್ಲ ಈಗ ಬ್ರೂಕ್‌ಬಾಂಡ್ ಬದಲಿ ಚುನಾವಣಾ ಬಾಂಡ್ ಚಹಪುಡಿ ಮಾರುಕಟ್ಟೆಗೆ ಬರುವ ಹಾಗೆ ಕಾಣುತ್ತದೆ ನಾನೇ ಏಜೆನ್ಸಿ ತೆಗೆದುಕೊಳ್ಳುತ್ತೇನೆ ಎಂದು ಹಿರಿಹಿರಿ ಹಿಗ್ಗಿದ್ದ. ಆ ಬಾಂಡ್‌ನ ನಿಜವಾದ ಮಾಲಿಕ ಯಾರು? ಕಮಲ ಪ್ರೊಡಕ್ಷನ್ ಅಥವಾ ಕೈ ಪ್ರೊಡಕ್ಷನ್? ಯಾವ ಪ್ರೊಡಕ್ಷನ್ ಇಬರಬಹುದು ಅವರು ಬಾಂಡ್ ಬಗ್ಗೆ ಮಾತನಾಡುತ್ತಾರೆ. ಇವರೂ ಮಾತನಾಡುತ್ತಾರೆ? ಯಾರು ನಿಜವಾದ ಪ್ರೊಡ್ಯೂಸರ್‌ಗಳು ಎಂಬುದರ ಬಗ್ಗೆ ತೀರ ತಲೆಕೆಡೆಸಿಕೊಂಡಿದ್ದ. ಸಣ್ಣೆಂಕೋಬಿ ಆಪ್ತ, ಗ್ರಾಪಂ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದ ರಾಜಕಾರಣಿ ಅಲೈಕನಕನನ್ನು ಕೇಳಿದರೆ ಎಲ್ಲ ಗೊತ್ತಿರುತ್ತದೆ. ಹೇಗೂ ರಾಜಕಾರಣದಲ್ಲಿದ್ದಾನೆ. ಈತ ಒಂದು ಮಾತು ಹೇಳಿದರೆ ಏಜೆನ್ಸಿ ನನಗೇ ಸಿಗುತ್ತದೆ ಎಂದು ಅಲೈಕನಕನ ಕಡೆಗೆ ಹೋದಾಗ..ಇಲ್ಲ ಅವರು ಚುನಾವಣೆಯಲ್ಲಿ ಬ್ಯುಸಿ ಆಗಿದ್ದಾರೆ. ಪ್ರಚಾರಕ್ಕೆ ಹೋಗಿದ್ದಾರೆ ಎಂದು ಹೇಳಿದರು. ಆದರೂ ಸಣ್ಣೆಂಕೋಬಿ ಬಿಟ್ಟುಬಿಡದೇ ಪ್ರಯತ್ನ ಮಾಡಿ, ಅಲೈಕನಕನನ್ನು ಸಂಧಿಸಿ ಆತನನ್ನು ಶೇಷಮ್ಮನ ಹೋಟೆಲ್‌ಗೆ ಕರೆದುಕೊಂಡು ಹೋಗಿ ಮಂಡಾಳೊಗ್ಗಣ್ಣಿ-ಮಿರ್ಚಿ-ಚಹ ಎಲ್ಲ ಸಮಾರಾಧನೆ ಮಾಡಿಸಿ ತನ್ನ ಮನೆಯ ಮಾಳಿಗೆ ಮೇಲೆ ಕರೆದುಕೊಂಡು ಹೋದ. ಸಣ್ಣೆಂಕೋಬಿ ಯಾಕೆ ಇಷ್ಟು ಬೆಣ್ಣೆ ಹಚ್ಚುತ್ತಿದ್ದಾನೆ? ಇದರ ಹಿಂದೆ ಏನಾದರೂ ಇದೆಯಾ? ಎಂದು ಮನಸ್ಸಿನಲ್ಲಿ ಅಂದುಕೊಂಡ. ಕೊನೆಗೆ ಹತ್ತಿರ ಬಂದ ಸಣ್ಣೆಂಕೋಬಿ…ಏನಿಲ್ಲ. ಮೊದಲು ಬ್ರೂಕ್‌ಬಾಂಡ್ ಚಹಪುಡಿ ಏಜೆನ್ಸಿ ನಂದೇ ಇತ್ತು. ಈಗ ಅದೇನೋ ಚುನಾವಣಾ ಬಾಂಡ್ ಎಂದು ಬಂದಿದೆಯಂತೆ. ಅದು ಕಮಲ ಅಥವಾ ಕೈ ಪ್ರೊಡಕ್ಷನ್ನಿನವರ ಕಡೆ ಇದೆಯಂತೆ. ನೀನೊಂದು ಮಾತು ಹೇಳಿ ನನಗೆ ಏಜೆನ್ಸಿ ಕೊಡಿಸಬೇಕು.
ನಾನು ಏನಿದೆಯೋ ಅದನ್ನು ನಿನಗೆ ಕೊಡುತ್ತೇನೆ ಎಂದು ಹೇಳಿದ. ಅಲೈಕನಕನ ತಲೆಯಲ್ಲಿ ಏನೇನೋ ಓಡಿ…ಕೊನೆಗೆ ಚುನಾವಣಾ ಬಾಂಡ್ ಬೇಡ…ನನಗೆ ಗೊತ್ತಿದ್ದ ಕಡೆ ಜೇಮ್ಸ್ಬಾಂಡ್ ಇದೆ ಅದೇ ಏಜೆನ್ಸಿ ಕೊಡಿಸುತ್ತೇನೆ ಎಂದು ಅಡ್ವಾನ್ಸ್ ಇಸಿದುಕೊಂಡು ಅಲ್ಲಿಂದ ಕಾಲ್ಕಿತ್ತ.

Previous articleಕೇಂದ್ರದ ಸೌರಶಕ್ತಿಗೆ ರಾಜ್ಯದ ಗ್ರಹಣ
Next articleಇಂದು ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸದು