ಚಿನ್ನ ಕಳ್ಳಸಾಗಣೆ ಕೇಸಲ್ಲಿ ಕೊನೆಗೂ ರನ್ಯಾಗೆ ಜಾಮೀನು

0
19

ಬೆಂಗಳೂರು: ಚಿತ್ರನಟಿ ಹಾಗೂ ಹಿರಿಯ ಐಪಿಎಸ್ ಅಧಿಕಾರಿ ಪುತ್ರಿ ರನ್ಯಾ ರಾವ್ ಹಾಗೂ ಆಕೆಯ ಸಹಚರ ತರುಣ್ ಕೊಂಡ ರಾಜು ಅವರಿಗೆ ವಿಚಾರಣಾ ನ್ಯಾಯಾಲಯ ಮಂಗಳವಾರ ಜಾಮೀನು ಮಂಜೂರು ಮಾಡಿದೆ.
ಚಿತ್ರನಟಿ ಹಾಗೂ ಹಿರಿಯ ಐಪಿಎಸ್ ಅಧಿಕಾರಿ ಪುತ್ರಿ ರನ್ಯಾ ರಾವ್ ಹಾಗೂ ಆಕೆಯ ಸಹಚರ ತರುಣ್ ಕೊಂಡರಾಜು ಅವರಿಗೆ ವಿಚಾರಣಾ ನ್ಯಾಯಾಲಯ ಮಂಗಳವಾರ ಜಾಮೀನು ಮಂಜೂರು ಮಾಡಿದೆ. ಆದರೆ ಕಾಫಿಪೋಸಾ ಪ್ರಕರಣ ಎದುರಿಸುತ್ತಿರುವ ರನ್ಯಾಗೆ ಸದ್ಯ ಜೈಲಿನಿಂದ ಬಿಡುಗಡೆ ಭಾಗ್ಯವಿಲ್ಲ.
ತಮ್ಮ ವಿರುದ್ಧ ಪ್ರಕರಣದ ದಾಖಲಿಸಿರುವ ಕೇಂದ್ರ ಸರಕಾರದ ಕಂದಾಯ ವಿಚಕ್ಷಣಾ ನಿರ್ದೇಶನಾಲಯ (ಡಿಆರ್‌ಐ) ನಿಗದಿತ ೬೦ ದಿನಗಳ ಒಳಗೆ ದೋಷಾರೋಪ ಪಟ್ಟಿ ಸಲ್ಲಿಸಲು ವಿಫಲವಾದ ಹಿನ್ನೆಲೆಯಲ್ಲಿ ಜಾಮೀನು ನೀಡುವಂತೆ ಕೋರಿ ರನ್ಯಾ ರಾವ್ ಹಾಗೂ ಇತರರು ನ್ಯಾಯಾಲಯದ ಮೊರೆ ಹೋಗಿದ್ದರು. ಮಂಗಳವಾರ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯವು ರನ್ಯಾ ರಾವ್ ಮತ್ತು ತರುಣ್ ರಾಜುಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತು.
ರನ್ಯಾ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಸಿ ಡಿಆರ್‌ಐ ಪ್ರಕರಣ ದಾಖಲಿಸುವ ವೇಳೆ ಕನ್ಸರ್ವೇಶನ್ ಆಫ್ ಫಾರಿನ್ ಎಕ್ಸ್ಚೇಂಜ್ ಆಂಡ್ ಪ್ರಿವೆನ್‌ಶನ್ ಆಫ್ ಸ್ಮಗ್ಲಿಂಗ್ ಆಕ್ವಿವಿಟಿಸ್ ಆಕ್ಟ್ ೧೯೭೪ (ಕಾಫಿಪೊಸಾ) ವಿಧಿಸಿರಲಿಲ್ಲ. ತದನಂತರ ಈ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆದ್ದರಿಂದ ವಿಚಾರಣೆ ಬಾಕಿ ಇರಿಸಿ ಬಿಡುಗಡೆ ಅನುಮತಿ ನೀಡಬೇಕೆಂದು ಮನವಿ ಮಾಡಿದರು. ಕೇಂದ್ರ ಸರಕಾರದ ಪರ ವಕೀಲರು ಮಧ್ಯಪ್ರವೇಶಿಸಿ, ಹೈಕೋರ್ಟ್ನಲ್ಲಿ ಕಾಫಿಪೊಸಾ ಪ್ರಕರಣ ಪ್ರಶ್ನಿಸಿ ಆರೋಪಿ ಅರ್ಜಿ ಸಲ್ಲಿಸಿದ್ದು, ಜೂನ್ ೩ಕ್ಕೆ ವಿಚಾರಣೆ ಮುಂದೂಡಲಾಗಿದೆ. ಆದ್ದರಿಂದ ಉಚ್ಛ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥ ಆಗುವ ತನಕ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಮನವರಿಕೆ ಮಾಡಿದರು.
ನ್ಯಾಯಾಲಯವು ಹೈಕೋರ್ಟ್ನ ಮುಂದಿನ ಆದೇಶಕ್ಕೆ ಒಳಪಟ್ಟು ಉಲ್ಲೇಖಿತ ಪ್ರಕರಣದಲ್ಲಿ ಮಾತ್ರ ಜಾಮೀನು ಅನ್ವಯವಾಗಲಿದೆ ಎಂದು ಸೂಚಿಸಿತು. ಹೀಗಾಗಿ ರನ್ಯಾ ರಾವ್‌ಗೆ ಜಾಮೀನು ಸಿಕ್ಕರೂ ಸದ್ಯಕ್ಕೆ ಜೈಲಿನಿಂದ ಬಿಡುಗಡೆ ಆಗುವಂತಿಲ್ಲ.

Previous articleರಾಯರ ಹುಂಡಿಯಲ್ಲಿ ₹ 3.79 ಕೋಟಿ ಕಾಣಿಕೆ ಸಂಗ್ರಹ
Next articleರಾಜ್ಯದಲ್ಲಿ 8 ಕೊವಿಡ್ ಪ್ರಕರಣಗಳು ಪತ್ತೆ