ಅಂಕೋಲಾ: ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕಿ ಚಿಕಿತ್ಸೆಗೆಂದು ತಾಯಿಯೊಂದಿಗೆ ಬಸ್ಸಿನಲ್ಲಿ ಸಾಗುತ್ತಿದ್ದ ವೇಳೆ ಮೃತ ಪಟ್ಟಿರುವ ಘಟನೆ ನಡೆದಿದೆ.
ಮೃತ ಬಾಲಕಿಯನ್ನು ಕಾರವಾರ ತಾಲೂಕಿನ ಮಾಜಾಳಿಯ ಸ್ನೇಹಾ ಸಾಗರ ಕೋಟಾರಕರ(೮) ಎಂದು ಗುರುತಿಸಲಾಗಿದೆ. ಅನಾರೋಗ್ಯದಿಂದಿದ್ದ ಬಾಲಕಿ ಸ್ನೇಹಾಳನ್ನು ಕಳೆದ ಕೆಲ ದಿನಗಳ ಹಿಂದೆ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಡಿಸಿದ್ದರು ಎನ್ನಲಾಗಿದೆ. ಆದರೆ ಬಾಲಕಿಗೆ ದೇಹದಲ್ಲಿ ಮತ್ತೆ ಏರುಪೇರುಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಾರವಾರದಿಂದ ಕುಮಟಾದಲ್ಲಿರುವ ಆಸ್ಪತ್ರೆಗೆ ತಾಯಿಯೊಂದಿಗೆ ಬಸ್ಸಿನಲ್ಲಿ ಸಾಗುತ್ತಿದ್ದಾಗ ಅವರ್ಸಾ ಸಮೀಪ ಈ ಅವಘಡ ಸಂಭವಿಸಿದೆ. ಏಕಾಏಕಿ ನಿತ್ರಾಣಗೊಂಡ ಬಾಲಕಿಯನ್ನು ಹಟ್ಟಿಕೇರಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ಯಲಾಗಿತ್ತು. ಪ್ರಾಥಮಿಕ ಚಿಕಿತ್ಸೆ ನೀಡಿದ ಡಾ.ಜುಬೇರ ಖಾನ್ ತಮ್ಮ ಕಾರಿನಲ್ಲಿ ತಾಲೂಕಾಸ್ಪತ್ರೆಗೆ ಸಾಗಿಸಲು ನೆರವಾದರು. ಆದರೆ ಅಂಕೋಲಾ ಸಾಗಿಸುತ್ತಿದ್ದಾಗ ಮಾರ್ಗ ಮಧ್ಯೆ ಮೃತಪಟ್ಟಳೆಂದು ತಿಳಿದು ಬಂದಿದೆ. ತಾಲೂಕು ಆರೋಗ್ಯಾಧಿಕಾರಿ ಡಾ. ಜಗದೀಶ ನಾಯ್ಕ, ಡಾ. ಅನುಪಮಾ ನಾಯ್ಕ, ಪೊಲೀಸ್ ನಿರೀಕ್ಷಕ ಚಂದ್ರಶೇಖರ ಮಠಪತಿ, ಪಿಎಸೈ ಸುನೀಲ್ ಸೇರಿದಂತೆ ಹಲವರು ಹಾಜರಿದ್ದರು.