ಚಾಮುಂಡೇಶ್ವರಿಗೆ 5 ವರ್ಷಗಳ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ

0
12

ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬದ ಯಜಮಾನಿ ಖಾತೆಗೆ ನೀಡುವ ತಿಂಗಳಿಗೆ 2 ಸಾವಿರ ರೂಪಾಯಿಗಳನ್ನು ತಾಯಿ ಚಾಮುಂಡೇಶ್ವರಿಗೂ ಅರ್ಪಣೆ ಮಾಡಲಾಗುತ್ತಿದ್ದು, ಚಾಮುಂಡೇಶ್ವರಿ ದೇವಿಗೆ 5 ವರ್ಷಗಳ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು “ನಮ್ಮ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯ ಐದು ವರ್ಷಗಳ ಕಂತನ್ನು ನನ್ನ ಪರವಾಗಿ ಶಾಸಕ ದಿನೇಶ್ ಗೂಳಿಗೌಡ ಅವರು ತಾಯಿ ಚಾಮುಂಡೇಶ್ವರಿಗೆ ಸಮರ್ಪಿಸಿದರು. ಪ್ರತಿ ತಿಂಗಳಿಗೆ 2 ಸಾವಿರ ರೂ.ನಂತೆ 59 ತಿಂಗಳ ಕಂತಿನ ಹಣ ಒಟ್ಟು 1.18 ಲಕ್ಷ ರೂ.ಗಳನ್ನು ವೈಯಕ್ತಿಕವಾಗಿ ಸಲ್ಲಿಸಿದ್ದೇನೆ. ಈಗಾಗಲೇ ಮೊದಲ ಕಂತನ್ನು ಸಿಎಂ ಸಿದ್ದರಾಮಯ್ಯನವರು, ಡಿಸಿಎಂ ಡಿ.ಕೆ.ಶಿವಕುಮಾರ ರವರು ಸಲ್ಲಿಸಿದ್ದರು.
ಪ್ರತಿ ತಿಂಗಳು ತಾಯಿ ಚಾಮುಂಡೇಶ್ವರಿ ದೇವಿಗೆ ಗೃಹಲಕ್ಷ್ಮಿ ಕಂತನ್ನು ನೀಡುವಂತೆ ಶಾಸಕ ದಿನೇಶ ಗೂಳಿಗೌಡ ಅವರು ಸಿಎಂ‌ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಲ್ಲಿ ಮನವಿ ಮಾಡಿದ್ದರು. ಅವರು ತಕ್ಷಣ ಈ ಕುರಿತು ಕ್ರಮ ವಹಿಸುವಂತೆ ಸೂಚಿಸಿದ್ದರು. ಆ ಹಿನ್ನೆಲೆಯಲ್ಲಿ ಒಂದೇ ಸಲ ಎಲ್ಲಾ ಕಂತಿನ ಹಣವನ್ನು ನಾಡದೇವಿಗೆ ಅರ್ಪಿಸಲಾಗಿದೆ
ಮೊದಲ ಕಂತನ್ನು ಸಿಎಂ, ಡಿಸಿಎಂ ಹಾಗೂ ನಾನು ತಾಯಿ ಚಾಮುಂಡೇಶ್ವರಿ ದೇವಿಗೆ ಅರ್ಪಿಸಿದ್ದೇವೆ. ಹಾಗಾಗಿ ಉಳಿದ 59 ತಿಂಗಳ ಹಣವನ್ನು ದೇವಿಗೆ ನಾನು ವೈಯಕ್ತಿಕವಾಗಿ ಸಲ್ಲಿಸುತ್ತಿದ್ದೇನೆ. ಈ ಮೊತ್ತವನ್ನು ಶಾಸಕರಾದ ದಿನೇಶ್ ಗೂಳಿಗೌಡ ಅವರ ಮೂಲಕ ಸಮರ್ಪಿಸುತ್ತಿದ್ದೇನೆ.
ಇದುವರೆಗೆ ರಾಜ್ಯಾದ್ಯಂತ 1 ಕೋಟಿ 17 ಲಕ್ಷ ಯಜಮಾನಿಯರು ಗೃಹಲಕ್ಷ್ಮಿ ಯೋಜನೆ ಮೂಲಕ ಹಣ ಪಡೆಯಲು ನೋಂದಣಿ ಮಾಡಿಕೊಂಡಿದ್ದಾರೆ. ಇವರಲ್ಲಿ 1 ಕೋಟಿ 10 ಲಕ್ಷ ಯಜಮಾನಿಯರ ಖಾತೆಗಳಿಗೆ ನೇರವಾಗಿ ಹಣ ಜಮಾ ಆಗುತ್ತಿದೆ. ಯೋಜನೆಗಾಗಿ ನಮ್ಮ ಸರ್ಕಾರ 11,200 ಕೋಟಿ ರೂ.ಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ. ಪ್ರತಿ ತಿಂಗಳು ಸುಮಾರು 2,100 ಕೋಟಿ ರೂ.ಗಳನ್ನು ಮಹಿಳೆಯರ ಖಾತೆಗೆ ಜಮಾ ಮಾಡಲಾಗುತ್ತಿದೆ. ಇದುವರೆಗೆ ಸುಮಾರು 6 ಸಾವಿರ ಕೋಟಿ ರೂ. ಜಮಾ ಆಗಿದೆ ಎಂದು ಬರೆದುಕೊಂಡಿದ್ದಾರೆ.

Previous articleಜನಸ್ಪಂದನ ಕಾರ್ಯಕ್ರಮ: ಸಮಸ್ಯೆಗಳ ಪರಿಹಾರಕ್ಕೆ ಹದಿನೈದು ದಿನಗಳ ಗಡುವು
Next articleಪ್ರತ್ಯೇಕ ರಾಜ್ಯವಾಗಿ ರೂಪುಗೊಳ್ಳಲು ಕಾಂಗ್ರೆಸ್ ಪಕ್ಷ ಕಾರಣ