ಚಾಕು ನುಂಗಿದ ಹಾವು : ಪವಾಡ ರೀತಿಯಲ್ಲಿ ಪಾರು

ಕಾರವಾರ: ನಾಗರಹಾವೊಂದು ಉದ್ದದ ಚಾಕು ನುಂಗಿದ್ದು ಪವಾಡಸದೃಶವಾಗಿ ಬದುಕುಳಿದ ಘಟನೆ ನಡೆದಿದೆ.
ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೆಗಡೆಯ ಗೋವಿಂದ ನಾಯ್ಕ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ, ಗೋವಿಂದ ನಾಯ್ಕರ ಅಡುಗೆ ಮನೆಯ ಗೋಡೆಯಲ್ಲಿದ್ದ ಚಾಕು ಅವರ ಗಮನಕ್ಕೆ ಬಾರದೆ ಮನೆಯ ಹಿಂಬದಿ ಹೊರಕ್ಕೆ ಬಿದ್ದಿತ್ತು. ಈ ವೇಳೆ ಅತ್ತ ಸುಳಿದಿದ್ದ ನಾಗರಹಾವು ಇದನ್ನು ತನ್ನ ಆಹಾರ ಎಂದು ಭ್ರಮಿಸಿ 1 ಅಡಿ 2 ಇಂಚು ಉದ್ದದ ಚಾಕುವನ್ನು ಅನಾಯಾಸವಾಗಿ ನುಂಗಿದೆ. ಈ ನಡುವೆ ಮನೆಯ ಹೊರಗೆ ಹಾವು ಓಡಾಡುತ್ತಿದ್ದರಿಂದ ಅಲ್ಲಿ ಹೋಗಲು ಗೋವಿಂದ್ ಕುಟುಂಬ ಕೂಡ ಹೆದರಿತ್ತು. ಅಲ್ಲೇ ಹಾವು ಕೂಡ ಏನೋ ತಿಂದು ವಿಶ್ರಾಂತ ಸ್ಥಿತಿಯಲ್ಲಿದ್ದು, ಹಾವು ಹೋಗಲಿ ಎಂದು ಕೆಲ ಹೊತ್ತು ಸಮಯ ಕಾದರೂ ಹಾವು ಹೋಗಲಿಲ್ಲ. ಚಾಕು ಇಲ್ಲದಿದ್ದದ್ದನ್ನು ನೋಡಿ ಅನುಮಾನಿಸಿ ಉರಗ ತಜ್ಞ ಪವನ್ ನಾಯ್ಕ ಅವರಿಗೆ ಕುಟುಂಬದವರು ಮಾಹಿತಿ ನೀಡಿದ್ದಾರೆ, ಸ್ಥಳಕ್ಕೆ ಬಂದ ಉರಗ ತಜ್ಞ ಪರಿಶೀಲಿಸಿದಾಗ ಹಾವು ಚಾಕು ನುಂಗಿದ್ದು ಖಚಿತವಾಗಿದೆ ಅದು ಅದೆ ಎದೆ ಭಾಗದಲ್ಲಿ ಸಿಲುಕಿದ್ದು ಕಂಡುಬಂದಿತ್ತು. ಚಾಕು ಹೊರ ತೆಗೆಯದೇ ಇದ್ದರೆ ಹಾವು ಸಾಯಲಿದೆ ಎಂದು ನಿರ್ಧರಿಸಿದ ಪವನ್‌, ಹಾವು ಹಿಡಿದು ಚಿಕಿತ್ಸೆಗೆ ಕೊಂಡೊಯ್ದಿದ್ದರು. ಪಶು ಆಸ್ಪತ್ರೆಯ ಸಹಾಯಕರಾದ ಅದ್ವೈತ ಭಟ್ ಅವರ ಸಹಕಾರದಿಂದ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಪ್ರಯತ್ನದ ಮೂಲಕ ಚಾಕುವನ್ನು ನಾಗರಹಾವಿನ ಹೊಟ್ಟೆಯಿಂದ ಹೊರ ತೆಗೆಯಲು ಯಶಸ್ವಿಯಾಗಿದ್ದಾರೆ. ನಂತರ ಹಾವನ್ನು ಸುರಕ್ಷಿತ ಸ್ಥಳದಲ್ಲಿ ಬಿಡುಗಡೆಗೊಳಿಸಿದ್ದಾರೆ.