ಗ್ಯಾರಂಟಿ ನಿಲ್ಲಿಸುವುದಕ್ಕೆ ಕಳ್ಳಮಾರ್ಗ ಹುಡುಕಬೇಡಿ

0
13

ಮಂಗಳೂರು: ಕಾಂಗ್ರೆಸ್ ನವರ ಗ್ಯಾರಂಟಿಗಾಗಿ ಹೊಟ್ಟೆಬಟ್ಟೆ ಕಟ್ಟಿಕೊಳ್ಳುವ ದಯನೀಯ ಸ್ಥಿತಿ ಮಂಗಳೂರಿನ‌ ಜನರಿಗೆ ಬಂದಿಲ್ಲ. ಗ್ಯಾರಂಟಿ ಘೋಷಣೆಯ ಬಳಿಕವೂ ಉಡುಪಿ- ದಕ್ಷಿಣಕನ್ನಡದಲ್ಲಿ ಮಖಾಡೆ ಮಲಗಿರುವ ಕಾಂಗ್ರೆಸ್ ನ್ನು ಎಬ್ಬಿಸುವುದಕ್ಕೆ ವಿಶೇಷ ಯೋಜನೆ ರೂಪಿಸಿ ಎಂದು ಮಾಜಿ ಸಚಿವ ವಿ.ಸುನೀಲ್ ಕುಮಾರ್ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಡಿ.ಕೆ.ಶಿವಕುಮಾರ್ ಅವರಿಗೆ ಕನಕಪುರದ ಆಚೆಗೆ ಬೇರೇನು ನಡೆಯುತ್ತಿದೆ ಎಂಬುದೇ‌ ಗೊತ್ತಿಲ್ಲ. ಹೀಗಾಗಿ ಅನ್ಯ ಜಿಲ್ಲೆಗಳ ಬಗ್ಗೆ ತಾತ್ಸಾರದ ಮಾತನಾಡುತ್ತಿದ್ದಾರೆ. ಈ ಹಿಂದೆ ಬೆಂಗಳೂರು ನಗರದ ಜನತೆಯ ಬಗ್ಗೆಯೂ ಹೀಗೆ ಮಾತನಾಡಿದ್ದರು. ಮಂಗಳೂರು ಸೇರಿದಂತೆ ಕರಾವಳಿಯ ಜನರು ಸ್ವಾಭಿಮಾನಿಗಳು. ಬೆಂಗಳೂರಿನ ನಂತರ ಅತಿ ಹೆಚ್ಚು ತೆರಿಗೆ ಸಂಗ್ರಹವಾಗುವುದು ಇಲ್ಲಿಂದಲೇ. ನಿಮ್ಮ ಗ್ಯಾರಂಟಿ‌ ನಂಬಿ ಮತದಾನ ಮಾಡುವಂತ ಬೌದ್ಧಿಕ ದಾರಿದ್ರ್ಯ ನಮಗೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೀವು ಗ್ಯಾರಂಟಿ ಘೋಷಣೆ ಮಾಡುವಾಗ ಇದು ಮಂಗಳೂರಿಗೆ ಅನ್ವಯವಾಗುವುದಿಲ್ಲ ಎಂಬ ನಿಬಂಧನೆ ವಿಧಿಸಿದ್ದಿರೇ ? ಗ್ಯಾರಂಟಿ ಜಾರಿಯಾದ ಮೇಲೆ ಮಂಗಳೂರಿನವರು ಅರ್ಜಿ ಸಲ್ಲಿಸಬಾರದು ಎಂದು ಕರಾರು ಹೇರಿದ್ದಿರೇ ? ಮಂಗಳೂರು ಕರ್ನಾಟಕದ ಭಾಗವಾಗಿರುವುದರಿಂದ ಇಲ್ಲಿನ ಜನ ಅರ್ಜಿ ಸಲ್ಲಿಸಿದ್ದಾರೆ. ಅಷ್ಟಕ್ಕೂ ನಿಮ್ಮ ಗ್ಯಾರಂಟಿ‌ ಯೋಜನೆ ಕನಕಪುರದವರಿಗೆ ಮಾತ್ರ ಸೀಮಿತವಲ್ಲ. ರಾಜ್ಯದ ಕರದಾತರ ಹಣದಲ್ಲಿ ಅನುಷ್ಠಾನ ಮಾಡುತ್ತಿದ್ದೀರಿ. ಹೊಟ್ಟೆಬಟ್ಟೆ ಕಟ್ಟಿಯಾದರೂ ನೀವು ಇದನ್ನು ಅನುಷ್ಠಾನ ಮಾಡಬೇಕೆ ವಿನಾ ನಿಲ್ಲಿಸುವುದಕ್ಕೆ ಕಳ್ಳಮಾರ್ಗ ಹುಡುಕಬೇಡಿ  ಎಂದು ವ್ಯಂಗ್ಯವಾಡಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಕರಾವಳಿ ಜಿಲ್ಲೆಗಳಲ್ಲಿ ಕೋಮು ಸಾಮರಸ್ಯ ಹದೆಗೆಡುತ್ತಿದೆ. ಇದಕ್ಕೆ ನಿಮ್ಮ ಓಲೈಕೆ ರಾಜಕಾರಣವೇ ಕಾರಣ. ಇದಕ್ಕಾಗಿಯೇ ಮಂಗಳೂರಿನ ಜನತೆ ನಿಮ್ಮನ್ನು ತಿರಸ್ಕರಿಸಿದ್ದಾರೆ. ನಾವು ಬೇಕಿದ್ದರೆ ಹೊಟ್ಟೆಬಟ್ಟೆ ಕಟ್ಟಿಯಾದರೂ ದುಡಿಯುತ್ತೇವೆ. ಆದರೆ ಕಾಂಗ್ರೆಸಿಗರ ಹಂಗು, ದಯಾ ಭಿಕ್ಷೆ ಬೇಕಿಲ್ಲ. ಇಂಥ ಕೀಳು ಅಭಿರುಚಿಯ ಹೇಳಿಕೆ ನೀಡಿ ಮಂಗಳೂರಿನವರ ಆತ್ಮಾಭಿಮಾನ ಕೆಣಕಬೇಡಿ ಎಂದು ಕಿವಿ ಮಾತು ಹೇಳಿದ್ದಾರೆ.

Previous articleಹೆದ್ದಾರಿಯಲ್ಲಿ ಕೃತಕ ನೆರೆ ಭೀತಿ
Next articleಪೊಲೀಸರ ಅವಹೇಳನ: ಇಬ್ಬರು ಯೂಟ್ಯೂಬರ್ ವಿರುದ್ಧ ಎಫ್ ಐಆರ್ ದಾಖಲು