ಹುಬ್ಬಳ್ಳಿ: ಗ್ಯಾರಂಟಿಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ದುರಾಡಳಿತದ ಮೂಲಕ ಜನರಿಗೆ ಮೋಸ ಮಾಡುತ್ತಿದೆ. ನಿತ್ಯದ ಜೀವನಕ್ಕೆ ಬೇಕಾದ ಎಲ್ಲ ದರಗಳು ಹೆಚ್ಚಾಗಿವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ದರ ಹೆಚ್ಚಳ ಖಂಡಿಸಿರುವ ಅವರು, ಕಾಂಗ್ರೆಸ್ ದೇಶದಲ್ಲಿ ಸುಳ್ಳು ಗ್ಯಾರಂಟಿ ಕೊಟ್ಟಿತ್ತು. ಅದು ಈಗ ಎಕ್ಸ್‌ಪೋಸ್ ಆಗುತ್ತಿದೆ. ಉಚಿತ ವಿದ್ಯುತ್ ಎಂದರು, ಈಗ ವಿದ್ಯುತ್ ದರ ಹೆಚ್ಚಳವಾಗಿದೆ. ಕಾಕಾಸಾಹೇಬ್ ಪಾಟೀಲ್, ಮಹದೇವಪ್ಪ ನಿನಗೂ ಫ್ರೀ ಅಂದವರು ಹಾಲು, ಪೆಟ್ರೋಲ್, ಡಿಸೇಲ್‌ಗೆ ಸೆಸ್ ಹಾಕುವ ಮೂಲಕ ಜನರನ್ನು ಆರ್ಧಿಕವಾಗಿ ಹಿಂಡುತ್ತಿದ್ದಾರೆ ಎಂದರು.
ಆಸ್ತಿ ನೋಂದಣಿ ದರ ಹೆಚ್ಚಳವಾಗಿದೆ. ಮದ್ಯದ ದರ ಹೆಚ್ಚಳವಾಗಿದೆ. ಈಗ ಸರ್ಕಾರ ಬಸ್ ಟಿಕೆಟ್ ದರ ಕೂಡ ಹೆಚ್ಚಳ ಮಾಡಿದೆ. ಗ್ಯಾರಂಟಿ ಯೋಜನೆಗಳಿಂದ ಹಿಮಾಚಲ ಪ್ರದೇಶದಲ್ಲಿ ಇಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ಅಲ್ಲಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ಹೊರಟಿದ್ದಾರೆ. ಅಧಿಕಾರಕ್ಕಾಗಿ ಯಾವ ಕೀಳುಮಟ್ಟಕ್ಕೂ ಇಳಿಯಲು ಕಾಂಗ್ರೆಸ್ ಹಿಂದೆ ಸರಿಯಲ್ಲ. ಕಾಂಗ್ರೆಸ್‌ನವರು ಬರೀ ಸುಳ್ಳು ಹೇಳುವ ನಿರ್ಲಜ್ಜರು ಎಂದು ವಾಗ್ದಾಳಿ ನಡೆಸಿದರು.
ಸಾರಿಗೆ ಸಂಸ್ಥೆ ೨,೦೦೦ ಕೋಟಿ ರೂಪಾಯಿ ಸಾಲ ಮಾಡುವ ಹಂತಕ್ಕೆ ಬಂದಿದೆ. ಕಾಂಗ್ರೆಸ್ ಸರ್ಕಾರದಲ್ಲಿ ನೌಕರರಿಗೆ ಸಂಬಳ ನೀಡಲು ಹಣ ಇಲ್ಲ. ಸಿದ್ದರಾಮಯ್ಯ ಸರ್ಕಾರ ದಿವಾಳಿ ಆಗಿದೆ. ಆದರೂ ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಗಳು ಲಾಭದಲ್ಲಿವೆ ಎಂದು ಸಿಎಂ ಹೇಳಿದ್ದಾರೆ. ಹಾಗಿದ್ದರೆ ಸಾಲವೇಕೆ ಎಂದು ಪ್ರಶ್ನಿಸಿದರು. ಇದರೊಟ್ಟಿಗೆ ಕೊಲೆ ಸುಲಿಗೆಗಳು ಹೆಚ್ಚಾಗಿ, ಜನಪ್ರತಿನಿಧಿಗಳನ್ನು ಸುಪಾರಿ ಕೊಟ್ಟು ಸಾಯಿಸುವ ಹೇಯ ಕೃತ್ಯಕ್ಕೆ ರಾಜ್ಯ ಸರ್ಕಾರ ಇಳಿದಿದೆ ಎಂದು ಆರೋಪಿಸಿದರು.