ಚಿತ್ರ: ಕಾಲವೇ ಮೋಸಗಾರ
ನಿರ್ದೇಶನ: ಸಂಜಯ್ ಕುಲಕರ್ಣಿ
ತಾರಾಗಣ: ಭರತ್ ಸಾಗರ್, ಯಶಸ್ವಿನಿ ರವೀಂದ್ರ, ವಿಜಯ್ ಚೆಂಡೂರ್, ಶಂಕರಮೂರ್ತಿ, ಕುರಿ ಪ್ರತಾಪ್, ಬ್ಯಾಂಕ್ ಜನಾರ್ದನ್, ದರ್ಶನ್ ಮತ್ತಿತರರು
- ಗಣೇಶ್ ರಾಣೆಬೆನ್ನೂರು
ಒಬ್ಬೊಬ್ಬರ ಪ್ರೀತಿ ಒಂದೊಂದು ರೀತಿ… ಕೆಲವರದ್ದು ಬಿಟ್ಟಿರಲಾರದಂಥ ಲವ್. ಅನೇಕರದ್ದು ತಾತ್ಕಾಲಿಕ ಪ್ರೇಮ..! ಹಾಗೆಯೇ ಕೆಲವೊಂದು ಪ್ರೇಮ್ ಕಹಾನಿಯಲ್ಲಿ ಸಖ ಅಥವಾ ಸಖಿಯೇ ಖಳರಾಗಿರುತ್ತಾರೆ. ಇತ್ತೀಚೆಗಂತೂ ಆ ರೀತಿಯ ಪ್ರಕರಣಗಳು ಸಾಕಷ್ಟು ಬೆಳಕಿಗೆ ಬಂದಿವೆ. ಈ ವಾರ ತೆರೆಕಂಡಿರುವ ‘ಕಾಲವೇ ಮೋಸಗಾರ’ ಸಹ ಅದೇ ಜಾಡಿನ ಸಿನಿಮಾ. ‘ನನ್ನ ಲವ್‌ಸ್ಟೋರೀಲಿ ನಾನೇ ಹೀರೋ… ವಿಲನ್ನೂ ನಾನೇ…’ ಎನ್ನುತ್ತಾ ಬಾರಿನತ್ತ ಮುಖ ಮಾಡಿರುತ್ತಾನೆ ಕಿಟ್ಟು (ಭರತ್ ಸಾಗರ್). ಆತನಿಗೆ ಸಾಥ್ ನೀಡಲು ಕೆಲವು ಗಂಟೆಗಳ ಹಿಂದಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿರುವ ಅವಿನಾಶ್ (ಶಂಕರ್) ಖುಷಿಯ ಮತ್ತಿನ ಜತೆಗೆ ಮತ್ತಷ್ಟು ‘ಮತ್ತು’ ಏರಿಸಿಕೊಳ್ಳಲು ಕಿಟ್ಟು ಎದುರು ಪ್ರತಿಷ್ಠಾಪಿಸಿರುತ್ತಾನೆ…
ಅಸಲಿ ಕಥೆ ಶುರುವಾಗುವುದೇ ಅಲ್ಲಿಂದ. ಕಿಟ್ಟು ಹಾಗೂ ಸಂಗೀತ ಶಿಕ್ಷಕಿ ಸಂಧ್ಯಾ (ಯಶಸ್ವಿನಿ) ಲವ್ ಸ್ಟೋರಿ ಹೇಗೆ ಶುರುವಾಯಿತು..? ಹೀಗೆಲ್ಲ ಆಗಲು ಕಾರಣವೇನು..? ಎಂದು ದುಂಬಾಲು ಬೀಳುತ್ತಾನೆ. ಆಗ ಫ್ಲ್ಯಾಶ್ ಬ್ಯಾಕ್ ತೆರೆದುಕೊಳ್ಳುತ್ತದೆ. ಕಿಟ್ಟು-ಸಂಧ್ಯಾ ಪ್ರೇಮಾಂಕುರದಿಂದ ಬ್ರೇಕಪ್‌ವರೆಗಿನ ಕಥೆ-ವ್ಯಥೆ ಹಂತ ಹಂತವಾಗಿ ಬಿಚ್ಚಿಡುತ್ತಾನೆ ಕಿಟ್ಟು. ಒಟ್ಟಾರೆ ಕಥೆ ಕೇಳಿ ಅವಿನಾಶ್‌ಗೆ ಕಿಟ್ಟು ಮೇಲೆ ಇನ್ನಿಲ್ಲದ ಕನಿಕರ ಮೂಡುತ್ತದೆ.
ಇತ್ತೀಚೆಗೆ ಮೇಘಾಲಯದಲ್ಲಿ ನಡೆದ ‘ಬಾ ನಲ್ಲ ಮಧುಚಂದ್ರಕೆ’ ಪ್ರಕರಣದಂತೆಯೇ ಇದೊಂಥರ ಟ್ವಿಸ್ಟ್ ಹೊಂದಿರುವ ಪ್ರೇಮ್ ಕಹಾನಿ. ಗೆಳೆಯನ ಮುಗಿಸಲು ಗೆಳತಿಯೇ ಸುಪಾರಿ ಕೊಟ್ಟಿರುತ್ತಾಳೆ ಎಂಬುದು ಒಟ್ಟಾರೆ ಸಾರಾಂಶ. ಮುಂದೇನು..? ಎನ್ನುವವರಿಗೆ ಕೆಲವು ಕುತೂಹಲಕಾರಿ ಅಂಶ ಉಳಿಸಿದ್ದಾರೆ ನಿರ್ದೇಶಕ ಸಂಜಯ್ ಕುಲಕರ್ಣಿ. ನಿರೂಪಣೆ ಮಂದಗತಿಯಲ್ಲಿದ್ದರೂ ನೋಡಿಸಿಕೊಂಡು ಹೋಗುತ್ತದೆ.
ಸಿನಿಮಾದುದ್ದಕ್ಕೂ ಭರತ್ ಸಾಗರ್ ನಟನೆ ಗಮನ ಸೆಳೆಯುತ್ತದೆ. ಭಿನ್ನ ಬಗೆಯ ಅಭಿನಯದ ಮೂಲಕ ಭರವಸೆ ಮೂಡಿಸಿದ್ದಾರೆ. ಯಶಸ್ವಿನಿ, ಶಂಕರ್, ಕುರಿ ಪ್ರತಾಪ್, ವಿಜಯ್ ಚೆಂಡೂರು ಮುಂತಾದವರು ಪಾತ್ರಕ್ಕೆ ತಕ್ಕಂತೆ ನಟಿಸಿದ್ದಾರೆ.