ಸಂ.ಕ. ಸಮಾಚಾರ, ಉಡುಪಿ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೃಹ ಇಲಾಖೆಯ ಪೂರ್ಣ ವೈಫಲ್ಯದಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗದೇ ಹತಾಶಗೊಂಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಕೇಸು ದಾಖಲಿಸಿ ದಮನಿಸಲು ಹೊರಟಿದೆ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೂ ಮುಖಂಡರಾದ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮೇಲೆ ಎಫ್.ಐ.ಆರ್ ದಾಖಲಿಸಿ, ಅರುಣ್ ಕುಮಾರ್ ಪುತ್ತಿಲ ಅವರನ್ನು ಗಡಿಪಾರು ಮಾಡಲು ನೋಟಿಸ್ ಜಾರಿ ಮಾಡಿದ್ದು, ಹಿಂದೂ ಕಾರ್ಯಕರ್ತರ ಮನೆಗೆ ರಾತೋರಾತ್ರಿ ಪೊಲೀಸರು ಬಂದು ಜಿ.ಪಿ.ಎಸ್. ಫೋಟೋ ತೆಗೆದು ರೌಡಿಗಳಂತೆ ಬಿಂಬಿಸಿ ಮಾನಸಿಕ ಸ್ಥೈರ್ಯ ಕುಗ್ಗಿಸಲು ಪೊಲೀಸ್ ಇಲಾಖೆ ಮುಂದಾಗಿರುವುದು ಖಂಡನೀಯ.
ಮತಾಂಧ ಶಕ್ತಿಗಳ ಓಲೈಕೆಗೆ ಮುಂದಾಗಿರುವ ಕಾಂಗ್ರೆಸ್ ಸರ್ಕಾರ ಜಿಲ್ಲೆಯ ಪೊಲೀಸ್ ವ್ಯವಸ್ಥೆಯನ್ನು ತನ್ನ ಕೈಗೊಂಬೆಯನ್ನಾಗಿಸಿಕೊಂಡು ಹಿಂದೂ ಕಾರ್ಯಕರ್ತರನ್ನು ದಮನಿಸಲು ಮುಂದಾಗಿದೆ.
ಜಿಲ್ಲೆಯಲ್ಲಿ ಅವ್ಯಾಹತವಾಗಿರುವ ಡ್ರಗ್ಸ್ ದಂಧೆ, ಲವ್ ಜಿಹಾದ್, ಅಕ್ರಮ ಗೋ ಸಾಗಾಟ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಂಪೂರ್ಣ ವಿಫಲವಾಗಿರುವ ಪೊಲೀಸ್ ಇಲಾಖೆ, ಕೇವಲ ಕಾಂಗ್ರೆಸ್ ಹಾಗೂ ಎಸ್.ಡಿ.ಪಿ.ಐ ಮುಖಂಡರ ಆಣತಿಯಂತೆ ಹಿಂದೂ ಕಾರ್ಯಕರ್ತರನ್ನು ಸುಳ್ಳು ಕೇಸು ಮೂಲಕ ಜೈಲುಪಾಲು ಮಾಡಲು ಮುಂದಾಗಿದೆ.
ಕಾಂಗ್ರೆಸ್ ಸರ್ಕಾರ ತಕ್ಷಣ ತನ್ನ ಈ ಹಿಂದೂ ವಿರೋಧಿ ನಿಲುವು ಹಾಗೂ ಹಿಂದೂ ಕಾರ್ಯಕರ್ತರನ್ನು ದಮನಿಸುವ ಪ್ರಯತ್ನ ಕೈಬಿಟ್ಟು ಕರಾವಳಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಮುಂದಾಗಬೇಕು. ಕಾಂಗ್ರೆಸ್ ಸರ್ಕಾರ ಇದೇ ಪ್ರವೃತ್ತಿ ಮುಂದುವರಿಸಿದರೆ ಬೀದಿಗಿಳಿದು ಹೋರಾಟ ಮಾಡುವ ಸನ್ನಿವೇಶ ನಿರ್ಮಾಣವಾಗಲಿದೆ ಎಂದು ಯಶಪಾಲ್ ಎಚ್ಚರಿಕೆ ನೀಡಿದ್ದಾರೆ.