ಗುಮ್ಮಟ ನಗರಿ ಪೂರ್ಣ ಬಂದ್

ವಿಜಯಪುರ: ಡಾ.ಬಿ.ಆರ್. ಅಂಬೇಡ್ಕರ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಡಿದ ಮಾತನ್ನು ಖಂಡಿಸಿ ಅವರ ರಾಜೀನಾಮೆಗೆ ಒತ್ತಾಯಿಸಿ ಅಹಿಂದ ಒಕ್ಕೂಟ ಸೋಮವಾರ ಕರೆ ನೀಡಿದ್ದ ವಿಜಯಪುರ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.
ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ಗಾಂಧಿವೃತ್ತ, ಕೇಂದ್ರ ಬಸ್ ನಿಲ್ದಾಣ, ಕೆ.ಸಿ. ಮಾರುಕಟ್ಟೆ ಸಂಚಾರವಿಲ್ಲದೇ ಬಿಕೋ ಎನ್ನುವಂತಾಯಿತು. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಸಾವಿರಾರು ಸಂಖ್ಯೆಯ ಯುವಕರು, ಅಹಿಂದ ಒಕ್ಕೂಟದ ಪದಾಧಿಕಾರಿಗಳು ಡಾ.ಅಂಬೇಡ್ಕರ ಅವರ ಭಾವಚಿತ್ರ ಹಿಡಿದು ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿದರು.
ಪ್ರಮುಖ ರಸ್ತೆಗಳಲ್ಲಿ ಟೈರ್ ಸುಟ್ಟು ರಸ್ತೆ ತಡೆದರು. ಶಾ ಅವರ ಅಣುಕು ಶವಯಾತ್ರೆ ನಡೆಸಿ, ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರ ತಂಡ ಕುದುರೆಯ ಮೇಲೆ ಸವಾರಿಯಾಗಿ ಹಿಂಭಾಗದಲ್ಲಿ ಅಮಿತ್ ಶಾ ಅವರ ಪ್ರತಿಕೃತಿಯನ್ನು ಎಳೆದು ತರುವ ದೃಶ್ಯ ಸಹ ಗೋಚರಿಸಿತು.