ಹುಬ್ಬಳ್ಳಿ: ರಾಜ್ಯ ಸರ್ಕಾರ ಆರ್ಥಿಕ, ಬೌದ್ಧಿಕವಾಗಿ ದಿವಾಳಿಯಾಗಿದೆ. ಸರ್ಕಾರದ ಬೊಕ್ಕಸ ಬರಿದಾಗಿದೆ. ಗುಣಮಟ್ಟದ ಔಷಧಿ ಖರೀದಿ ಮಾಡಲೂ ದುಡ್ಡಿಲ್ಲ. ಕಳಪೆ ಔಷಧಿ ಪೂರೈಕೆ ಕಂಪನಿಗಳಿಂದ ಖರೀದಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಗಂಭೀರ ಆರೋಪ ಮಾಡಿದರು.
ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಯೇ ಲಭ್ಯವಿಲ್ಲ. ವೈದ್ಯರು ಹೊರಗಡೆ ತರಲು ಚೀಟಿ ಬರೆದು ಕೊಡುತ್ತಿದ್ದಾರೆ. ರಾಜ್ಯವನ್ನು ಇಂಥ ಅವಸ್ಥೆಗೆ ತಂದಿಟ್ಟಿದೆ ಈ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗುಣಮಟ್ಟದ ಕಂಪನಿಗಳಿಂದ ಔಷಧಿ ಖರೀದಿಸಲು ರಾಜ್ಯ ಸರ್ಕಾರದ ಬಳಿ ಹಣವಿಲ್ಲ. ಹಾಗಾಗಿ ಸಿಕ್ಕ ಸಿಕ್ಕ ಕಂಪನಿಗಳಿಂದ ಔಷಧಿ ಖರೀದಿಸುತ್ತಿದ್ದಾರೆ. ಅದರ ಪರಿಣಾಮದಿಂದಲೇ ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಸಂಭವಿಸಿದೆ ಎಂದು ಕಿಡಿಕಾರಿದರು. ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಅವರಿಗೆ ಕೆಟ್ಟ ಮೇಲೆ ಬುದ್ಧಿ ಬಂದಂತಿದೆ. ಈಗ ಪ್ರಕರಣದ ಗಂಭೀರತೆ, ಸೂಕ್ಷ್ಮತೆ ಅರಿತಿದ್ದಾರೆ ಎಂದು ಹೇಳಿದರು.
ಆರೋಗ್ಯ ಸಚಿವರ ವೈಫಲ್ಯ: ಬಳ್ಳಾರಿ ಬಾಣಂತಿಯರ ಸಾವಿನ ಪ್ರಕರಣದಲ್ಲಿ ಆರೋಗ್ಯ ಸಚಿವರು ಸಂಪೂರ್ಣ ವೈಫಲ್ಯ ಕಂಡಿದ್ದಾರೆ. ತಮ್ಮ ತಪ್ಪು ಮುಚ್ಚಿಕೊಳ್ಳಲು ಕೇಂದ್ರದತ್ತ ಬೆರಳು ತೋರುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ತಪಾಸಣೆ ಮಾಡ್ಬೇಕು:
ಐವಿ ದ್ರಾವಣಕ್ಕೆ ಕೇಂದ್ರ ಅನುಮತಿ ನೀಡಿದೆ ಎಂದಿದ್ದಾರೆ. ಆದರೆ, ಕೇಂದ್ರದ ಅನುಮತಿ ಪಡೆಯುವಾಗ ಗುಣಮಟ್ಟದ ಔಷಧಿ ಕಳಿಸಿ ನಂತರದಲ್ಲಿ ಕಳಪೆ ಗುಣಮಟ್ಟದ್ದನ್ನು ಪೂರೈಸಿದರೆ ಯಾರು ಹೊಣೆ? ರಾಜ್ಯ ಸರ್ಕಾರ ಆಗಾಗ ತಪಾಸಣೆ ನಡೆಸಬೇಕಲ್ಲವೇ? ಎಂದು ಸಚಿವ ಜೋಶಿ ಪ್ರಶ್ನಿಸಿದರು.
ಕೇಂದ್ರದ ಮೇಲೆ ಗೂಬೆ ಸರಿಯಲ್ಲ: ರಾಜ್ಯದಲ್ಲಿ ಐವರು ಬಾಣಂತಿಯರ ಸಾವಿಗೆ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಮಳೆಯಾದರೂ ಕೇಂದ್ರ, ಜನಸಂಖ್ಯೆ ಜಾಸ್ತಿ ಆದ್ರೂ ಕೇಂದ್ರ ಕಾರಣ ಎನ್ನುವಂತಿದೆ ಇವರ ಮನಸ್ಥಿತಿ. ಇದು ಸರಿಯಲ್ಲ ಎಂದು ಖಂಡಿಸಿದರು.
21ನೇ ಶತಮಾನದಲ್ಲಿ ಬಾಣಂತಿಯರ ಸಾವು ನಾಚಿಕೆಗೇಡು: 21ನೇ ಶತಮಾನದ ಮುಂದುವರಿದ ಮೆಡಿಕಲ್ ಸೈನ್ಸ್ ಯುಗದಲ್ಲಿ ಬಾಣಂತಿಯರ ಸಾವು ಎಂದರೆ ನಾಚಿಕೆಗೇಡಿನ ಸಂಗತಿ. ರಾಜ್ಯ ಕಾಂಗ್ರೆಸ್ ಸರ್ಕಾರ ಗಂಭೀರವಾಗಿ ಪರಿಗಣಿಸದೇ ಇರುವುದಕ್ಕೆ ನಾಚಿಕೆಯಾಗಬೇಕು ಎಂದು ಸಚಿವ ಪ್ರಲ್ಹಾದ ಕಿಡಿಕಾರಿದರು.