ಗಾಂಜಾ ಸಾಗಣೆಗೆ ಗಡಿ ಜಿಲ್ಲೆ ಬಳ್ಳಾರಿಯೇ ಹೆಬ್ಬಾಗಿಲು…

0
9

ಬಳ್ಳಾರಿ: ಮಾದಕ ವಸ್ತುಗಳ ಸಾಗಣೆಗೆ ಬಳ್ಳಾರಿ ಹೆಬ್ಬಾಗಿಲು ಆಗಿದೆ. ನೆರೆಯ ಆಂಧ್ರಪ್ರದೇಶ ಸೇರಿದಂತೆ ಆಂಧ್ರಕ್ಕೆ ಹೊಂದಿಕೊಂಡಿರುವ ನಮ್ಮ ರಾಜ್ಯದ ಗಡಿಭಾಗದ ಗುಡ್ಡಗಾಡು ಪ್ರದೇಶದಲ್ಲಿ ವ್ಯಾಪಕವಾಗಿ ಗಾಂಜಾ ಬೆಳೆಯಲಾಗುತ್ತದೆ. ಗಾಂಜಾವನ್ನು ಕಟಾವು ಮಾಡಿ, ಒಣಗಿಸಿ ನೀಟಾಗಿ ಕಳ್ಳ ಸಾಗಣೆ ಮಾಡುವುದರಲ್ಲಿ ಆಂಧ್ರ ಮತ್ತು ಕರ್ನಾಟಕ ಗಡಿ ಗ್ರಾಮದಲ್ಲಿರುವ ಕೆಲ ಮಾದಕ ವಸ್ತುಗಳ ಪೂರೈಕೆದಾರರು ನುರಿತು ಬಿಟ್ಟಿದ್ದಾರೆ. ರಾಜ್ಯದ ಮೂಲೆ ಮೂಲೆಗೆ ಈ ಗಾಂಜಾ ಸಾಗಣೆ ಆಗುತ್ತದೆ ಎಂಬ ಅಚ್ಚರಿಯ ಅಂಶ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಗಾಂಜಾ ಪೂರೈಕೆಯಲ್ಲಿ ಆಂಧ್ರ, ಕರ್ನಾಟಕದ ಪರೋಡಿಗಳು ಮಾತ್ರ ಇಲ್ಲ ಬದಲಿಗೆ ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ ವಿದ್ಯಾವಂತರು ಸಹ ಇದ್ದಾರೆ ಎಂಬುದು ಅಚ್ಚರಿಯ ಸಂಗತಿ.
ಮೇ ೨೧ರಂದು ಕೌಲ್ ಬಜಾರ್ ಪೊಲೀಸರು ಗಾಂಜಾ ಬೆಳೆಯುವ, ಅದನ್ನು ಪೂರೈಸುವ ಜಾಲವನ್ನು ಬೇಧಿಸಿ ಬರೋಬ್ಬರಿ ೫೫ ಕೆಜಿ ಗಾಂಜಾ ವಶಪಡಿಸಿಕೊಂಡಿದ್ದರು. ಇದೀಗ ಈ ಜಾಲ ಬೆನ್ನು ಹತ್ತಿ ಹೋಗಿರುವ ಬಳ್ಳಾರಿ ಪೊಲೀಸರು ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಆದೋನಿ ಮಂಡಲ ವ್ಯಾಪ್ತಿಯ ಸಂತೆಕುಡ್ಲುರು ಹಳ್ಳಿಯ ಮನೆಯೊಂದರ ಮೇಲೆ ದಾಳಿ ಮಾಡಿರುವ ಪೊಲೀಸರು ಮೇ೨೨ರಂದು ಬಂಧಿತರಾಗಿದ್ದ ರವಿ ಮತ್ತು ಚಂದ್ರ ಎಂಬ ಇಬ್ಬರು ಆರೋಪಿಗಳ ಮನೆ ಮೇಲೆ ದಾಳಿ ನಡೆಸಿ ಸುಮಾರು ೨ ಕೋಟಿ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.
೨೨ರಂದು ಬಳ್ಳಾರಿ ನಗರದ ಜಾಗೃತಿ ನಗರದ ಸೇತುವೆ ಮೇಲೆ ಗಾಂಜಾ ಮಾರಾಟ ಮಾಡುತ್ತಿದ್ದ ಮೊಹಮದ್ ಮುಜಾಕಿರ್, ಎಸ್. ರಿಜ್ವಾನ್‌ರನ್ನು ಬಂಧಿಸಲಾಗಿತ್ತು. ಇವರು ಕೊಟ್ಟ ಮಾಹಿತಿ ಆಧರಿಸಿ, ಇಂದು ಸಂತೆಕುಡ್ಲುರು ಗ್ರಾಮದ ರವಿ, ಚಂದ್ರರ ಮನೆ ಮೇಲೆ ದಾಳಿ ಮಾಡಿ ನಗದು ವಶಪಡಿಸಿಕೊಳ್ಳಲಾಗಿದೆ.
ಆಂಧ್ರ ಪ್ರದೇಶದಿಂದ ಬರುವ ಗಾಂಜಾವನ್ನು ಅದಕ್ಕೆ ಇನ್ನಷ್ಟು ರಾಸಾಯನಿಕ ಲೇಪನಮಾಡಿ ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ ನಶೆ ಪ್ರಿಯರಿಗೆ ಮಾರಾಟ ಮಾಡಲಾಗುತ್ತದೆ. ಕಳೆದ ವರ್ಷ ಮತ್ತೊಂದು ಪ್ರಕರಣದಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಗಾಂಜಾ ಸೇವನೆ ಮಾಡುವ ವೇಳೆ ಬಂಧನಕ್ಕೆ ಒಳಗಾಗಿದ್ದರು. ಇದೇ ರೀತಿಯ ಹಲವು ಪ್ರಕರಣಗಳು ಜಿಲ್ಲೆಯಲ್ಲಿ ನಡೆಯುತ್ತಲೇ ಇವೆ. ಕೆಲ ಸಂದರ್ಭದಲ್ಲಿ ಅಮಾಯಕ ರೈತರಿಗೆ ಹಣದ ಆಸೆ ತೋರಿಸಿ ಕಬ್ಬಿನ ಗದ್ದೆ ಮಧ್ಯೆ ಗಾಂಜಾ ಬೆಳೆಯುವ ಪ್ರಕರಣಗಳು ಸಹ ಬೆಳಕಿಗೆ ಬಂದಿವೆ.

Previous articleತತ್ವ ನಿಷ್ಠ ನಿಜ ಜಂಗಮ ಶ್ರೀ ಸಿದ್ಧಾರೂಢರು
Next articleಆಸಕ್ತಿ ತೊರೆದರೆ ಸಂಸಾರ ಸಸಾರ