ಗಲಭೆಕೋರರ ರಕ್ಷಣೆಗೆ ಮುಂದಾಗಿರುವ ಸರ್ಕಾರ

0
9

ದಾವಣಗೆರೆ: ಹುಬ್ಬಳ್ಳಿಯಲ್ಲಿ ಪೊಲೀಸರ ಮೇಲೆ ನಡೆದ ಹಲ್ಲೆ ಹಾಗೂ ಪೊಲೀಸ್ ಠಾಣೆಗೆ ಬೆಂಕಿ ಇಡಲು ಮುಂದಾಗಿದ್ದ ಗಲಭೆಕೋರರ ಪ್ರಕರಣವನ್ನು ಹಿಂಪಡೆಯಲು ನಿರ್ಧಾರ ಕೈಗೊಂಡಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ಗಲಭೆಕೋರರ ರಕ್ಷಣೆಗೆ ಮುಂದಾಗಿದೆ. ಈ ಸರ್ಕಾರಕ್ಕೆ ಸಮಾಜ ಉತ್ತಮ ರೀತಿಯಲ್ಲಿ ನಡೆದುಕೊಂಡು ಹೋಗುವುದು ಇಷ್ಟವಿಲ್ಲ ಎಂದು ಮಾಜಿ ಸಿಎಂ, ಸಂಸದ ಹೆಚ್.ಡಿ. ಕುಮಾರಸ್ವಾಮಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮರ‍್ನಾಲ್ಕು ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಸಮಾಜಕ್ಕೆ ರಕ್ಷಣೆ ನೀಡುವ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ, ಠಾಣೆಗೆ ಬೆಂಕಿ ಇಡಲು ಅಲ್ಪಸಂಖ್ಯಾತ ಗಲಭೆಕೋರರು ಮುಂದಾಗಿದ್ದರು. ಇಂಥವರನ್ನು ಸ್ವತಃ ಸರ್ಕಾರವೇ ರಕ್ಷಣೆ ಮಾಡಲು ಹೊರಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹುಬ್ಬಳ್ಳಿ ನಡೆದ ಹಿಂದಿನ ಹಲವು ಪ್ರಕರಣಗಳಲ್ಲಿನ ಕೇಸ್‌ಗಳನ್ನು ಹಿಂಪಡೆಯುವ ಕುರಿತು ಚರ್ಚೆ ನಡೆಯುತ್ತಿದೆ. ಕೇಸ್‌ಗಳನ್ನು ವಾಪಾಸ್ ಪಡೆಯಬೇಕಾದರೆ ಅದನ್ನು ಪೂರ್ಣ ಪ್ರಮಾಣದಲ್ಲಿ ಪರಾಮರ್ಶಿಸಬೇಕು. ಡೆಫ್ಟ್ ಏನಿದೆ ಅಂತಾ ನೋಡಬೇಕು. ಇದನ್ನು ಬಿಟ್ಟು ಸರ್ಕಾರ ಏಕಾಏಕಿ ಕೇಸ್ ಹಿಂಪಡೆಯುವುದರ ಹಿಂದೆ ಮತಬ್ಯಾಂಕ್‌ನ ದುರುದ್ದೇಶ ಅಡಗಿದೆ. ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ. ಸಮಾಜದ ಸ್ವಾಸ್ಥ್ಯ ಕಾಪಾಡುವುದು ಕಾಂಗ್ರೆಸ್‌ಗೆ ಇಷ್ಟವಿಲ್ಲ ಎಂದು ದೂರಿದರು.

ಸರ್ಕಾರ ಜಾಹೀರಾತು ನೀಡಿದ ವಿಚಾರವಾಗಿ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ ಸರ್ಕಾರ ಜಾಹೀರಾತಿಗಾಗಿ ೧೭ ಕೋಟಿ ಹಣ ವ್ಯಯಿಸಿದೆ. ಜಾಹೀರಾತು ಹೆಸರಲ್ಲಿ ರಾಜ್ಯದ ತೆರಿಗೆ ಹಣ ಲೂಟಿ ಹೊಡೆಯಲಾಗುತ್ತಿದೆ. ಆ ಹಣದಲ್ಲಿ ಒಂದು ಪಂಚಾಯತಿಯನ್ನು ಮಾಡೆಲ್ ಮಾಡಬಹುದಿತ್ತು ಎಂದರು.

ನನ್ನ ವಿರುದ್ಧ ದೂರು ಕೊಟ್ಟಿರುವ ಹಿಂದೆ ಯಾರಿದ್ದಾರೆ ಎಂದು ನನಗೆ ತಿಳಿದಿದೆ. ನನ್ನ ಕೇಸ್ ೨೦೧೨ ರಿಂದ ಎಸ್‌ಐಟಿಯಲ್ಲಿ ನಡೆಯುತ್ತಿದೆ. ಹತ್ತು ವರ್ಷವಾದರೂ ಅದನ್ನ ಯಾಕೆ ಇನ್ನೂ ಜೀವಂತವಾಗಿ ಇಟ್ಟುಕೊಂಡಿದ್ದಾರೆ ಎಂದು ಅವರೇ ಹೇಳಬೇಕು. ತನಿಖೆ ನಡೆಯುತ್ತಿದೆ ಕೊರ್ಟ್ನಲ್ಲಿ ಉತ್ತರ ನೀಡುತ್ತೇನೆ ಇಲ್ಲಿ ಚರ್ಚೆ ಆಗುವುದು ಬೇಡ ಎಂದು ತಮ್ಮ ವಿರುದ್ಧದ ಪ್ರಕರಣ ಕುರಿತ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು.

Previous articleಕಪ್ಪು ಬಟ್ಟೆ ಪ್ರದರ್ಶಿಸಿದ ಬಿಜೆಪಿ ಕಾರ್ಯಕರ್ತನ ಬಂಧನ…
Next articleಬಿಜೆಪಿ ಶಾಸಕರ ಮನವಿ ಸ್ವೀಕರಿಸದೇ ಸಿಎಂ ದುರಹಂಕಾರ