ಸಂ. ಕ. ಸಮಾಚಾರ, ಮಂಗಳೂರು: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನಾವೂರು ಗ್ರಾಮದ ಬಡಗುಂಡಿಯಲ್ಲಿ ಗುರುವಾರ ಬೆಳಗ್ಗೆ ಪತಿ-ಪತ್ನಿಯ ಮೃತದೇಹ ಪತ್ತೆಯಾಗಿದೆ. ಪತ್ನಿಯನ್ನು ಕೊಲೆಗೈದು ಪತಿ ಆತ್ಮಹತ್ಯೆಗೈದಿದ್ದಾನೆ ಎಂದು ತಿಳಿಸಿದ್ದಾರೆ.
ಬಡಗುಂಡಿ ನಿವಾಸಿ ತಿಮ್ಮಪ್ಪ ಮೂಲ್ಯ (೫೨) ಎಂಬಾತ ಗರ್ಭಿಣಿಯಾಗಿದ್ದ ಪತ್ನಿ ಜಯಂತಿ (೪೫)ಯನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡಿರುವ ಆರೋಪಿ.
ತಿಮ್ಮಪ್ಪ ಮೂಲ್ಯ ಕ್ಷುಲ್ಲಕ ಕಾರಣಕ್ಕೆ ಪತ್ನಿ ಜಯಂತಿ ಜೊತೆ ಜಗಳ ಮಾಡಿದ್ದಾನೆ. ಅದು ವಿಕೋಪಕ್ಕೆ ತಿರುಗಿದ್ದು, ಆರೋಪಿ ತಿಮ್ಮಪ್ಪ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಕೂಡಾ ಅಡುಗೆ ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ಬೆಳಗ್ಗೆ ೮ ಗಂಟೆ ಸುಮಾರಿಗೆ ಕೃತ್ಯ ಬೆಳಕಿಗೆ ಬಂದಿದ್ದು, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಿಮ್ಮಪ್ಪರ ಮನೆ ಮಿತ್ತಮಜಲಿನಲ್ಲಿದ್ದು, ಜಯಂತಿಯ ಮನೆ ಬಡಗುಂಡಿಯಲ್ಲಿದೆ. ಇವರಿಗೆ ೧೫ ವರ್ಷಗಳ ಹಿಂದೆ ಮದುವೆಯಾಗಿದ್ದು, ಈವರೆಗೆ ಮಕ್ಕಳಾಗಿರಲಿಲ್ಲ. ಸದ್ಯ ಜಯಂತಿ ಗರ್ಭಿಣಿಯಾಗಿದ್ದು, ಜುಲೈ ೨ಕ್ಕೆ ಸೀಮಂತಕ್ಕೆ ದಿನಾಂಕ ನಿಗದಿಯಾಗಿತ್ತು. ಘಟನೆಯ ಹಿನ್ನೆಲೆಯಲ್ಲಿ ಮೃತರ ಮನೆಯಲ್ಲಿ ದುಃಖ ಆವರಿಸಿದೆ.