ಗ್ಯಾರಂಟಿಗಳ ಅನುಷ್ಠಾನದ. ಪ್ರತಿಕೂಲ ಪರಿಣಾಮ ಅಧ್ಯಯನ ಅಗತ್ಯ. ಖಾಸಗಿ ಬಸ್‌ಗಳಿಗೆ ಆಗಿರುವ ಆರ್ಥಿಕ ನಷ್ಟ ಸಮಸ್ಯೆಗೆ ಪರಿಹಾರ ಬೇಕು.
ರಾಜ್ಯದಲ್ಲಿ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಿದ ಕೂಡಲೇ ಖಾಸಗಿ ಬಸ್, ಆಟೋ ಮಾಲೀಕರು ತಮಗೆ ನಷ್ಟವಾಗುತ್ತದೆ ಎಂದು ಹೇಳಿದ್ದರು. ಉಚಿತ ಪ್ರಯಾಣಕ್ಕೆ ಅವಕಾಶ ನೀಡುವುದನ್ನು ಅವರು ವಿರೋಧಿಸಿರಲಿಲ್ಲ. ನಮ್ಮಲ್ಲೂ ಮಹಿಳೆಯರಿಗೆ ಉಚಿತ ಸವಲತ್ತು ನೀಡುತ್ತೇವೆ. ನಮಗೂ ಹಣ ಕೊಡಿ ಎಂದು ಒತ್ತಾಯಿಸಿದ್ದರು. ಇದು ಹಣಕಾಸಿನ ವಿಚಾರವಾಗಿದ್ದರಿಂದ ಮುಖ್ಯಮಂತ್ರಿ ತೀರ್ಮಾನ ಕೈಗೊಳ್ಳಬೇಕು ಎಂದು ಸರ್ಕಾರ ತಿಳಿಸಿತ್ತು. ಸಾರಿಗೆ ಸಚಿವರು ಅರ್ಥಿಕ ಇಲಾಖೆಗೆ ಸೇರಿದ ೩ ಬೇಡಿಕೆಗಳನ್ನು ಹೊರತುಪಡಿಸಿ ಉಳಿದ ೨೭ ಬೇಡಿಕೆಗಳ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದ ಮೇಲೆ ಆಟೋ ಮತ್ತು ಖಾಸಗಿ ಬಸ್ ಮಾಲೀಕರ ಪ್ರತಿಭಟನೆ ಸುಖಾಂತ್ಯ ಕಂಡಿದೆ.
ಆದರೆ ಅವರು ಗ್ಯಾರಂಟಿ ಯೋಜನೆ ವಿಸ್ತರಣೆಯಲ್ಲದೆ, ರಸ್ತೆ ತೆರಿಗೆ ರದ್ದತಿ, ಆಟೋ ಚಾಲಕರಿಗೆ ೧೦ ಸಾವಿರ ರೂ. ನೆರವು ನೀಡಬೇಕೆಂದು ಒತ್ತಾಯಿಸಿದ್ದಾರೆ. ಇದಲ್ಲದೆ ಅನಧಿಕೃತ ಬೈಕ್ ಟ್ಯಾಕ್ಸಿ ನಿಷೇಧ ಸೇರಿದಂತೆ ೨೭ ಬೇಡಿಕೆಗಳನ್ನು ಮಂಡಿಸಿದ್ದಾರೆ. ಇವುಗಳನ್ನು ಸಾರಿಗೆ ಇಲಾಖೆ ಪರಿಶೀಲಿಸಬೇಕಿದೆ. ನಮ್ಮ ದೇಶದಲ್ಲಿ ಸಾರಿಗೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ರಾಷ್ಟ್ರೀಕರಣ ಮಾಡಿಲ್ಲ. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಸುಗ್ರೀವಾಜ್ಞೆ ಮೂಲಕ ಖಾಸಗಿ ಬಸ್ ರಾಷ್ಟ್ರೀಕರಣ ನಡೆಯಿತು. ಅಗ ರಾಜ್ಯದ ಕೆಲವು ಭಾಗಗಳಲ್ಲಿ ಖಾಸಗಿ ಬಸ್‌ಗಳ ಸಂಚಾರ ಮುಂದುವರಿಯಿತು. ಈಗ ಖಾಸಗಿ ಬಸ್‌ಗಳಿಗೂ ಸರ್ಕಾರವೇ ಪರ್ಮಿಟ್ ನೀಡಿದೆ. ನಮ್ಮಲ್ಲಿ ಸರ್ಕಾರಿ ಬಸ್‌ಗಳಿಗೆ ವಿಶೇಷ ರಿಯಾಯಿತಿಯನ್ನು ನೀಡಿಲ್ಲ. ಅದು ಸರ್ಕಾರಿ ನಿಗಮವಾಗಿ ಕೆಲಸ ಮಾಡುತ್ತಿದೆ. ಮೋಟಾರ್ ವಾಹನ ತೆರಿಗೆ ಎಲ್ಲರಿಗೂ ಸಮಾನ. ಹೊಸ ಬಸ್ ಖರೀದಿಗೆ ಮಾತ್ರ ಸರ್ಕಾರ ನಿಗಮಕ್ಕೆ ನೆರವು ನೀಡುತ್ತಿದೆ. ಸರ್ಕಾರ ಮಹಿಳೆಯರಿಗೆ ಉಚಿತ ಪ್ರಯಾಣ ಎಂದು ಘೋಷಿಸಿದ ಮೇಲೆ ಖಾಸಗಿ ಬಸ್‌ಗಳು ನಷ್ಟಕ್ಕೆ ಒಳಗಾಗಿವೆ ಎಂಬ ಕೂಗು ಪ್ರಧಾನವಾಗಿ ಕೇಳಿ ಬರುತ್ತಿದೆ. ಇದಕ್ಕೆ ಪರಿಹಾರ ನೀಡುವುದು ಹೇಗೆ ಎಂಬುದು ಮಾತ್ರ ಸರ್ಕಾರಕ್ಕೆ ತಿಳಿಯುತ್ತಿಲ್ಲ. ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಎಂದರೆ ಸರ್ಕಾರ ಶಕ್ತಿ ಯೋಜನೆಗೆ ನೀಡಿರುವ ಹಣಕ್ಕೆ ಎರಡು ಪಟ್ಟು ವೆಚ್ಚ ಮಾಡಬೇಕಾಗುತ್ತದೆ. ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಿಸಿದ ಮೇಲೆ ಸರ್ಕಾರಿ ಬಸ್‌ಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಸರ್ಕಾರ ಹೊಸ ಬಸ್‌ಗಳ ಖರೀದಿ ಮಾಡಿ ನಿಗಮಕ್ಕೆ ನೀಡಬೇಕಾಗಿ ಬಂದಿದೆ. ಅಲ್ಲದೆ ಹೊಸದಾಗಿ ಸಿಬ್ಬಂದಿಯನ್ನೂ ನೇಮಕ ಮಾಡಬೇಕಿದೆ. ಇದು ಸರ್ಕಾರಿ ಬಸ್ ಪರಿಸ್ಥಿತಿಯಾದರೆ ಮತ್ತೊಂದು ಕಡೆ ಖಾಸಗಿ ಬಸ್‌ಗಳು ಜನರಿಲ್ಲದೆ ಖಾಲಿ ನಿಂತಿವೆ. ಖಾಸಗಿ ಬಸ್‌ನವರು ನಮಗೂ ಅದೇ ರಿಯಾಯಿತಿ ವಿಸ್ತರಿಸಿ ನಾವೂ ಮಹಿಳೆಯರನ್ನು ಉಚಿತವಾಗಿ ಕರೆದುಕೊಂಡು ಹೋಗುತ್ತೇವೆ. ಅವರ ಪ್ರಯಾಣದ ವೆಚ್ಚವನ್ನು ನಮಗೂ ಕೊಡಿ ಎಂದು ಒತ್ತಾಯಿಸುತ್ತಿದ್ದಾರೆ. ಹಿಂದೆ ಸರ್ಕಾರ ಯಾವುದೇ ವಿನಾಯಿತಿ ಘೋಷಿಸಿದರೂ ಅದು ಸಮಾಜದ ಒಂದು ಸಣ್ಣ ವರ್ಗಕ್ಕೆ ಅನುಕೂಲವಾಗುತ್ತಿತ್ತು. ಈಗ ಮಹಿಳಾ ಸಮುದಾಯಕ್ಕೆ ಸಾರಾಸಗಟಾಗಿ ಉಚಿತ ಸವಲತ್ತು ಕಲ್ಪಿಸಲಾಗಿದೆ. ಇದರ ಪ್ರತಿಕೂಲ ಪರಿಣಾಮವೂ ದೊಡ್ಡದೆ. ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಇದು ಅನುಕೂಲವಾಗಿದೆ ಎಂಬುದನ್ನು ಒಪ್ಪಿದರೂ ಖಾಸಗಿ ಬಸ್‌ಗಳ ಮಾಲೀಕರ ಆರ್ಥಿಕ ಸಮಸ್ಯೆಯೂ ಪ್ರಮುಖವಾಗಿದೆ. ಸಾರಿಗೆ ವ್ಯವಸ್ಥೆ ಸುವ್ಯವಸ್ಥಿತವಾಗಿ ನಡೆಯಬೇಕು. ಅದು ಸರ್ಕಾರದ ವ್ಯಾಪ್ತಿಯಲ್ಲಿ ಬೇಕಾದರೂ ಇರಬಹುದು ಅಥವ ಖಾಸಗಿ ರಂಗದಲ್ಲಿ ಬೇಕಾದರೂ ಇರಬಹುದು. ಈ ರೀತಿ ವ್ಯವಸ್ಥೆ ಇದ್ದಾಗ ಸರ್ಕಾರಿ ಸಾರಿಗೆ ವ್ಯವಸ್ಥೆಯಲ್ಲಿ ಪ್ರಯಾಣಿಕರಿಗೆ ನೀಡುವ ಸವಲತ್ತನ್ನು ಖಾಸಗಿ ಸಾರಿಗೆ ವ್ಯವಸ್ಥೆಗೂ ವಿಸ್ತರಿಸಲು ಬರುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಖಾಸಗಿ ರಂಗದಲ್ಲಿ ಯಾರೇ ಬಂಡವಾಳ ಹೂಡಿದರೂ ಅವರು ಸರ್ಕಾರದಿಂದ ಪರ್ಮಿಟ್ ಪಡೆಯಬಹುದು ಅಷ್ಟೆ. ಬ್ಯಾಂಕ್ ಸಾಲ ನೀಡಬಹುದು. ಉಳಿದದ್ದು ಖಾಸಗಿಯವರಿಗೆ ಸೇರಿದ ವಿಷಯ. ಖಾಸಗಿ ಬಸ್‌ಗಳ ಸಂಚಾರಕ್ಕೆ ಬೇಕಾದ ಸುಲಭ ನಿಯಮಗಳನ್ನು ಸರ್ಕಾರ ರಚಿಸಬಹುದೇ ಹೊರತು ಆರ್ಥಿಕ ನೆರವು ನೀಡಲು ಬರುತ್ತದೆಯೇ ಎಂಬುದು ತೀರ್ಮಾನವಾಗಿಲ್ಲ. ಈಗ ಪ್ರತಿಭಟನೆ ನಿಂತಿದೆ. ಸರ್ಕಾರ ಖಾಸಗಿ ಬಸ್ ಮತ್ತು ಆಟೋದವರೊಂದಿಗೆ ಸುದೀರ್ಘ ಚರ್ಚೆ ನಡೆಸಿ ಬಗೆಹರಿಸಬೇಕು.