ಖಾಸಗಿ ಬಸ್ಸಿನಡಿಗೆ ಬಿದ್ದ ಬೈಕ್: ಓರ್ವ ಸಾವು

0
28

ಕೊಕ್ಕಡ: ಧರ್ಮಸ್ಥಳ-ಸುಬ್ರಹ್ಮಣ್ಯ ರಸ್ತೆಯ ಕೊಕ್ಕಡ ಸಮೀಪದ ಕಾಪಿನಬಾಗಿಲು ಎಂಬಲ್ಲಿ ಅಯ್ಯಪ್ಪ ಯಾತ್ರಾರ್ಥಿಗಳ ಬಸ್ಸಿನಡಿಗೆ ಬೈಕ್ ಬಿದ್ದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಕೊನೆಯುಸಿರೆಳೆದ ಘಟನೆ ಡಿ. 15 ರ ಸಂಜೆ ಸಂಭವಿಸಿದೆ.
ಮೃತ ಬೈಕ್ ಸವಾರನನ್ನು ಮೂಡುಬೈಲು ನಿವಾಸಿ ಮಾಧವ ಆಚಾರ್ಯ (46) ಎಂದು ಗುರುತಿಸಲಾಗಿದೆ. ಆಂಧ್ರಪ್ರದೇಶ ಮೂಲದ ಅಯ್ಯಪ್ಪ ಮಾಲಾಧಾರಿಗಳು ಧರ್ಮಸ್ಥಳದಿಂದ ಸುಬ್ರಮಣ್ಯಕ್ಕೆ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದು, ಕೊಕ್ಕಡದಿಂದ ಮೂಡುಬೈಲಿನ ತನ್ನ ಮನೆಗೆ ಹೋಗುತ್ತಿದ್ದ ಮಾಧವ ಆಚಾರ್ಯರ ಬೈಕ್ ಕಾಪಿನಬಾಗಿಲು ಸಪ್ತಗಿರಿ ಕಾಂಪ್ಲೆಕ್ಸ್ ಸಮೀಪ ಮುಖಮುಖಿ ಡಿಕ್ಕಿ ಆಗಿದೆ. ಅಪಘಾತದ ರಭಸಕ್ಕೆ ಬೈಕ್ ಸವಾರನ ತಲೆಗೆ ಗಂಭೀರ ಗಾಯವಾಗಿದ್ದು ತಕ್ಷಣ ಅವರನ್ನು ಆಂಬುಲೆನ್ಸ್ ಮೂಲಕ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತ ಮಾಧವ ಆಚಾರ್ಯರು ಮರದ ಕೆಲಸ (ಬಡಗಿ) ಮಾಡುತ್ತಿದ್ದರು. ತಂದೆ, ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ.

Previous articleಜಾಕೀರ್ ಹುಸೇನ್ ನಿಧನ ಬಗ್ಗೆ ವದಂತಿ
Next articleದೇಶಾದ್ಯಂತ ಇಂದು ವಿಜಯ ದಿವಸ ಆಚರಣೆ