ಕ್ಷಮೆ ಕೇಳದಿರುವುದು ಕಮಲಹಾಸನ್ ಅವರ ಉದ್ಧಟತನ

ಚೇತನ್‌

ದಾವಣಗೆರೆ: ಕನ್ನಡ ವಿರೋಧಿ ಹೇಳಿಕೆ ನೀಡಿರುವ ಕಮಲಹಾಸನ್ ಅವರು ಯಾವಾಗ ತಮ್ಮ ಮಾತು ಸತ್ಯವಲ್ಲ ಎನ್ನುವುದು ಅರಿವಿಗೆ ಬರುತ್ತದೋ ಆಗ ಕ್ಷಮೆಯಾಚಿಸಬೇಕು. ಅದನ್ನು ಬಿಟ್ಟು ಕ್ಷಮೆ ಕೇಳುವುದಿಲ್ಲ ಎನ್ನುವುದು ಅವರ ಉದ್ಧಟತನ ತೋರುತ್ತದೆ ಎಂದು ನಟ ಅಹಿಂಸಾ ಚೇತನ್ ಹೇಳಿದರು.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಟ ಕಮಲ್ ಹಾಸನ್ ಸೇರಿದಂತೆ ಹಲವರು ಕಾಲಕ್ಕೆ ತಕ್ಕಂತೆ ಅಪ್‌ಡೇಟ್ ಆಗಿಲ್ಲ ಅನ್ನಿಸುತ್ತದೆ. ಕನ್ನಡದ ಕುರಿತು ತಿಳುವಳಿಕೆಯಿಲ್ಲದಾಗ ಅದರ ಬಗ್ಗೆ ಅವರು ಮಾತನಾಡಬಾರದು. ಮಾತನಾಡಿರುವುದು ತಪ್ಪೆಂದು ತಿಳಿದಾಗ ಮೊಂಡುತನ ಮಾಡದೆ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದರು.

ಪಂಚ ದ್ರಾವಿಡ ಭಾಷೆಗಳೆಲ್ಲ ಸೋದರ-ಸಹೋದರಿ ಭಾಷೆಗಳು. ಯದುವೀರ್ ಅವರ ಹೇಳಿಕೆ ಕೂಡ ಕಮಲಹಾಸನ್ ಅವರ ರೀತಿ ಇದೆ, ಅವರು ಕೂಡ ಕನ್ನಡದ ಬಗ್ಗೆ ತಿಳಿದುಕೊಳ್ಳದೆ ಮಾತನಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದು ಭಾಷೆಗಳ ನಡುವಿನ ಘರ್ಷಣೆ ಅಲ್ಲ, ಇದು ಸತ್ಯ ಹಾಗೂ ಸುಳ್ಳಿನ ನಡುವಿನ ಸಂಘರ್ಷ. ವರನಟ ರಾಜ್ ಕುಮಾರ್ ಕನ್ನಡ ನಾಡು, ಭಾಷೆಗಾಗಿ ಗೋಕಾಕ್ ಚಳುವಳಿಯಲ್ಲಿ ಭಾಗವಹಿಸಿ ಹೋರಾಟ ನಡೆಸಿದ್ದರು. ಶಿವರಾಜ್ ಕುಮಾರ್ ಕೂಡ ಆ ಹೋರಾಟವನ್ನು ಮುಂದುವರೆಸಬೇಕಿತ್ತು. ಆದರೆ, ಸ್ನೇಹ, ಸಿನಿಮಾ ಎಂದು ಹೇಳಿ ಸುಳ್ಳುಗಳನ್ನು ಸಮರ್ಥಿಸಿಕೊಳ್ಳುವುದು ಸರಿಯಲ್ಲ. ವಿರೋಧಿಸದಿರುವುದು ಕಂಡರೆ ಶಿವರಾಜ್‌ಕುಮಾರ್‌ಗೆ ಕನ್ನಡ ಭಾಷೆ, ನೆಲಕ್ಕಿಂತ ಸಿನಿಮಾ ಕೆರಿಯರ್ ಮುಖ್ಯ ಎನ್ನಿಸುತ್ತದೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಕನ್ನಡ ಪರವಾಗಿ ಒಂದು ಯೋಜನೆ ತಂದಿಲ್ಲ. ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಕೆಲಸ ಮೀಸಲಾತಿ ಎಂದು ಕಾನೂನು ಬೆಳಗ್ಗೆ ತಂದು ಸಂಜೆ ವಾಪಸ್ಸು ಪಡೆಯುತ್ತಾರೆ ಎಂದರೆ ಎಷ್ಟು ವೈಫಲ್ಯವಿದೆ ಎನ್ನುವುದು ತಿಳಿಯುತ್ತದೆ. ಕನ್ನಡಕ್ಕೆ ದ್ರೋಹ ಮಾಡಿದ್ದೇ ಈ ಕಾಂಗ್ರೆಸ್ ಸರ್ಕಾರ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಗಲಭೆ ವಿಚಾರವಾಗಿ ಮಾತನಾಡಿದ ಚೇತನ್, ವಾಕ್ ಸ್ವಾತಂತ್ರ‍್ಯ ಇರೋದರಿಂದ ಸಂವಿಧಾನ ಗಟ್ಟಿಯಾಗಿದೆ. ವಾಕ್ ಸ್ವಾತಂತ್ರ‍್ಯ ಇದೆ ಎನ್ನುವ ಕಾರಣಕ್ಕೆ ಒಂದು ಸಮುದಾಯವನ್ನು ಹೀನಾಯ ಮಾಡುವುದು ಸರಿಯಲ್ಲ. ಮಂಗಳೂರಿನಲ್ಲಿ ಮನುವಾದ ಹಾಗೂ ಹಿಂದುತ್ವದ ವಿಚಾರವಾಗಿ ಘರ್ಷಣೆಯಾಗುತ್ತದೆ. ಇದರಿಂದ ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ನಿಯಂತ್ರಣ ಮಾಡುವಲ್ಲಿ ವಿಫಲವಾಗಿದೆ ಎನ್ನುವುದು ಮೇಲ್ನೋಟಕ್ಕೆ ತಿಳಿಯುತ್ತದೆ ಎಂದರು.

ಎಸ್ಸಿ ಎಸ್ಟಿ ಹಣವನ್ನು ಬಿಜೆಪಿ ಹಾಗೂ ಕಾಂಗ್ರೆಸ್ ಎರಡು ಪಕ್ಷಗಳು ದುರುಪಯೋಗ ಪಡಿಸಿಕೊಂಡಿವೆ. ಅದರಲ್ಲೂ ಬಿಜೆಪಿಗಿಂತ ಕಾಂಗ್ರೆಸ್ ಹೆಚ್ಚು ಹಣವನ್ನು ದುರುಪಯೋಗ ಮಾಡಿಕೊಂಡಿದೆ. ಕಮಲ್ ಹಾಸನ್ ರೀತಿ ಸಿದ್ದರಾಮಯ್ಯ ಕೂಡ ಮೊಂಡುತನವನ್ನು ಮಾಡುತ್ತಿದ್ದಾರೆ. ಎಸ್ಸಿ ಎಸ್ಟಿ ಮೀಸಲಿಟ್ಟ ಹಣವನ್ನು ಬೇರೆ ಯೋಜನೆಗೆ ಬಳಕೆ ಮಾಡಬಹುದು ಎಂದು ಹೇಳುತ್ತಿದ್ದಾರೆ. ದಲಿತರ ಅಭಿವೃದ್ಧಿ, ನ್ಯಾಯಕ್ಕಾಗಿ ಮೀಸಲಿಟ್ಟ ಹಣವನ್ನು ಎರಡು ವರ್ಷ ದುರ್ಬಳಕೆ ಮಾಡಿಕೊಂಡಿರುವ ರಾಜ್ಯಸರ್ಕಾರ ಮೂರನೇ ವರ್ಷ ದುರ್ಬಳಕೆ ಮಾಡಿಕೊಳ್ಳದೆ ಹೆಚ್ಚಿನ ಹಣವನ್ನು ಮೀಸಲಿಡಬೇಕು ಎಂದು ಒತ್ತಾಯಿಸಿದರು.