ಬೆಳಗಾವಿ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಓರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬಂಧಿತನಿಂದ ಲಕ್ಷಾಂತರ ರೂ. ನಗದು ಹಣ ಹಾಗೂ ಮೊಬೈಲ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕ್ರಿಕೆಟ್ ಬೆಟ್ಟಿಂಗ್ ಆಟದಲ್ಲಿ ತೊಡಗಿದ್ದ ಬೆಳಗಾವಿಯ ಸಿಂಧಿ ಕಾಲೋನಿಯ ಉದ್ದವ ಎನ್ನುವವನ್ನು ಬಂಧಿಸಲಾಗಿದೆ. ಬೆಳಗಾವಿಯಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿರುವ ಮಾಹಿತಿ ಮೇರೆಗೆ ಸಿ.ಇ.ಎನ್ ಪೊಲೀಸ್ ಠಾಣೆಯ ಪಿಐ ಬಿ.ಆರ್. ಗಡೇಕರ್ ನೇತೃತ್ವದಲ್ಲಿ ಸಿಇಎನ್ ಹಾಗೂ ಕ್ಯಾಂಪ್ ಪೊಲೀಸರು ನಗರದ ಸಿಂಧಿ ಕಾಲನಿಯಲ್ಲಿರುವ ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ ನಡೆಸಿದ್ದಾರೆ.
ಓರ್ವನನ್ನು ಬಂಧಿಸಿದ್ದು, ಪರಾರಿಯಾಗಿರುವ ಮತ್ತೋರ್ವ ಬುಕ್ಕಿಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಈ ದಾಳಿಯ ವೇಳೆ 12 ಐಫೋನ್, 13 ಬೇಸಿಕ್ ಹ್ಯಾಂಡ್ ಸೆಟ್, ಸ್ಮಾರ್ಟ್ ಟಿವಿ 2 ಲಕ್ಷ ನಗದು ಹಣವನ್ನು ಜಪ್ತಿ ಮಾಡಲಾಗಿದೆ ಎಂದು ಡಿಸಿಪಿ ರೋಹನ್ ಜಗದೀಶ್ ತಿಳಿಸಿದ್ದಾರೆ.